ಬಿಹಾರ: ಕೋವಿಡ್-19ಗೆ ಮದುಮಗ ಬಲಿ, 111 ಅತಿಥಿಗಳಿಗೂ ಸೋಂಕು

Update: 2020-07-01 05:44 GMT

ಪಾಟ್ನಾ, ಜು.1: ಬಿಹಾರದಲ್ಲಿ ಮದುವೆ ಸಮಾರಂಭವು ಕೊರೋನ ವೈರಸ್ ಆರ್ಭಟದಿಂದಾಗಿ ದುರಂತದಲ್ಲಿ ಅಂತ್ಯಗೊಂಡಿದ್ದು, ಕೋವಿಡ್-19ಗೆ ಮದುಮಗ ಮೃತಪಟ್ಟಿದ್ದರೆ, ಮದುವೆಯಲ್ಲಿ ಭಾಗವಹಿಸಿದ್ದ 100ಕ್ಕೂ ಅಧಿಕ ಅತಿಥಿಗಳಿಗೆ ಕೊರೋನ ವೈರಸ್ ಇರುವುದು ದೃಢಪಟ್ಟಿದೆ.

ಜೂ.15ರಂದು ಮದುವೆಯಾದ ಮರುದಿನವೇ ಮದುಮಗ ಮೃತಪಟ್ಟಿದ್ದು, ಆತನ ಸ್ಯಾಂಪಲ್‌ನ್ನು ಪರೀಕ್ಷಿಸಲಾಗಿಲ್ಲ.

ರಾಜ್ಯ ರಾಜಧಾನಿ ಪಾಟ್ನಾದಲ್ಲಿ ನಡೆದಿದ್ದ ಮದುವೆ ಸಮಾರಂಭದಲ್ಲಿ 350ಕ್ಕೂ ಅಧಿಕ ಅತಿಥಿಗಳು ಭಾಗವಹಿಸಿದ್ದರು. ಮದುಮಗ ಗುರುಗ್ರಾಮದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮದುವೆಯ ದಿನದಂದೇ ಅನಾರೋಗ್ಯಕ್ಕೀಡಾಗಿದ್ದ ಮದುಮಗನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಕೋವಿಡ್-19 ಲಕ್ಷಣ ಕಾಣಿಸಿಕೊಂಡ ಕಾರಣ ಪಾಟ್ನಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮದುಮಗನ ಮನೆಯವರು ಔಷಧವನ್ನು ತೆಗೆದುಕೊಳ್ಳುವಂತೆ ಬಲವಂತ ಪಡಿಸಿ ಮದುವೆ ಕಾರ್ಯ ನೆರವೇರಿಸಿದ್ದರು.

ಮದುಮಗ ಮೃತಪಟ್ಟ ಬಳಿಕ ಕುಟುಂಬ ಸದಸ್ಯರು ಕೋವಿಡ್-19 ಪರೀಕ್ಷೆಯನ್ನು ನಡೆಸದೆ ಅಂತ್ಯಕ್ರಿಯೆ ನಡೆಸಿದ್ದಾರೆ. ಮದುವೆಯಲ್ಲಿ ಭಾಗವಹಿಸಿದ್ದ ಕೆಲವು ಸಂಬಂಧಿಕರಿಗೆ ಕೊರೋನ ವೈರಸ್ ಲಕ್ಷಣ ಕಾಣಿಸಿಕೊಂಡಿದ್ದು ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ವೈರಸ್ ನಿರ್ಬಂಧಗಳನ್ನು ಉಲ್ಲಂಘಿಸಿ ಮದುವೆ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಜನರು ಭಾಗವಹಿಸಿರುವ ಕುರಿತು ತನಿಖೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News