ಬಾಯ್ಲರ್ ಸ್ಫೋಟಗೊಂಡು 6 ಮಂದಿ ಮೃತ್ಯು; 17 ಮಂದಿಗೆ ಗಾಯ

Update: 2020-07-01 16:59 GMT

ಚೆನ್ನೈ, ಜು.1: ತಮಿಳುನಾಡಿನ ಕುಡಲೂರು ಜಿಲ್ಲೆಯಲ್ಲಿರುವ ವಿದ್ಯುತ್ ಸ್ಥಾವರದಲ್ಲಿ ಬುಧವಾರ ಬೆಳಗ್ಗೆ ಬಾಯ್ಲರ್ ಸ್ಫೋಟಗೊಂಡು 6 ಜನ ಸಾವನ್ನಪ್ಪಿದ್ದು ಇತರ 17 ಜನರಿಗೆ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಸರಕಾರದ ಅಧೀನದಲ್ಲಿರುವ ಎನ್‌ಎಲ್‌ಸಿ ಇಂಡಿಯಾ ಲಿ.(ಈ ಹಿಂದೆ ನೈವೇಲಿ ಲಿಗ್ನೈಟ್ ಕಾರ್ಪೊರೇಶನ್ ಲಿ. )ನ ಕುಡಲೂರು ಉಷ್ಣವಿದ್ಯುತ್ ಸ್ಥಾವರದಲ್ಲಿ ಈ ಸ್ಫೋಟ ಸಂಭವಿಸಿದೆ. ಕಳೆದ 2 ತಿಂಗಳಲ್ಲಿ ದೇಶದ ವಿವಿಧೆಡೆ ವಿದ್ಯುತ್ ಸ್ಥಾವರದಲ್ಲಿ ಹಲವು ದುರಂತ ಪ್ರಕರಣಗಳು ಸಂಭವಿಸಿದೆ. ಗಾಯಗೊಂಡವರನ್ನು ಚೆನ್ನೈಯ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ . ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ . ಗಾಯಗೊಂಡವರಲ್ಲಿ 10 ಜನ ಗುತ್ತಿಗೆ ಕಾರ್ಮಿಕರು. ಮೃತಪಟ್ಟವರ ಬಗ್ಗೆ ವಿವರ ಸಂಗ್ರಹಿಸಲಾಗುತ್ತಿದೆ ಎಂದು ವಿದ್ಯುತ್ ಸ್ಥಾವರದ ನಿರ್ದೇಶಕ ಆರ್ ವಿಕ್ರಮನ್ ಹೇಳಿದ್ದಾರೆ.

ನೈವೇಲಿ ವಿದ್ಯುತ್ ಸ್ಥಾವರದಲ್ಲಿ ಆದ ಸಾವುನೋವಿನಿಂದ ಆಘಾತವಾಗಿದೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿಯನ್ನು ಸಂಪರ್ಕಿಸಿ ಅಗತ್ಯದ ನೆರವಿನ ಬಗ್ಗೆ ಭರವಸೆ ನೀಡಿದ್ದೇನೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಸಾವುನೋವಿನ ಬಗ್ಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಪಳನಿಸ್ವಾಮಿ, ಮೃತಪಟ್ಟವರ ಕುಟುಂಬಕ್ಕೆ ತಲಾ 3 ಲಕ್ಷ ರೂ., ತೀವ್ರ ಗಾಯಗೊಂಡವರ ಕುಟುಂಬಕ್ಕೆ ತಲಾ 1 ಲಕ್ಷ ರೂ., ಸಣ್ಣಪುಟ್ಟ ಗಾಯಗೊಂಡವರ ಕುಟುಂಬಕ್ಕೆ 50,000 ರೂ. ಪರಿಹಾರಧನ ಘೋಷಿಸಿದ್ದಾರೆ.

ಸ್ಫೋಟ ಸಂಭವಿಸಿದ ಸ್ಥಾವರದಲ್ಲಿ 1,470 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಎನ್‌ಎಲ್‌ಸಿ ಇಂಡಿಯಾ ಲಿ.ನಲ್ಲಿ 15,000 ಗುತ್ತಿಗೆ ನೌಕರರ ಸಹಿತ 27,000 ಉದ್ಯೋಗಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News