ಕಂಪ್ಯೂಟರ್ ‍ನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದು A+ ಶ್ರೇಣಿಯೊಂದಿಗೆ ಉತ್ತೀರ್ಣನಾದ ಅಂಧ ವಿದ್ಯಾರ್ಥಿ ಹಾರೂನ್ ಕರೀಂ

Update: 2020-07-01 13:07 GMT

ತಿರುವನಂತಪುರಂ: ಕಂಪ್ಯೂಟರ್ ಬಳಸಿ ಎಸೆಸೆಲ್ಸಿ ಪರೀಕ್ಷೆಯನ್ನು ಬರೆದಿದ್ದ ರಾಜ್ಯದ 15 ವರ್ಷದ ಅಂಧ ವಿದ್ಯಾರ್ಥಿ ಹಾರೂನ್ ಕರೀಂ ಟಿ. ಕೆ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ A+ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾನೆ.

ಎಸೆಸೆಲ್ಸಿ ಪರೀಕ್ಷೆಯನ್ನು ಕಂಪ್ಯೂಟರ್ ಮೂಲಕ ಬರೆದ ಮೊದಲ ವಿದ್ಯಾರ್ಥಿಯಾಗಿದ್ದಾನೆ ಹಾರೂನ್. ಕಂಪ್ಯೂಟರ್ ಬಳಸಿದಲ್ಲಿ ಅಂಧ ವಿದ್ಯಾರ್ಥಿಗಳು ಇತರರನ್ನು ಅವಲಂಬಿಸಬೇಕಿಲ್ಲ ಎಂಬ ಆಧಾರದಲ್ಲಿ ಆತ ಸರಕಾರದ ಮುಂದೆ ಈ ಬೇಡಿಕೆ ಇಟ್ಟಿದ್ದ. ಕೊನೆಗೆ ಸರಕಾರದ ಅನುಮತಿ ದೊರೆತು ಕಂಪ್ಯೂಟರ್ ನಲ್ಲಿಯೇ ಪರೀಕ್ಷೆ ಬರೆದು ಹಾರೂನ್ ಮಾಡಿದ ಸಾಧನೆಯನ್ನು ರಾಜ್ಯವೇ ಕೊಂಡಾಡುತ್ತಿದೆ.

ಸಂಪೂರ್ಣ ದೃಷಿಹೀನನಾಗಿರುವ ಹಾರೂನ್ ಕಂಪ್ಯೂಟರ್ ಮತ್ತು ತಂತ್ರಜ್ಞಾನದಲ್ಲಿ ಅಪರಿಮಿತ ಪ್ರೀತಿ ಹೊಂದಿದ್ದ. ಅಂಧರಿಗಾಗಿರುವ ಸಹಾಯಕ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿದ್ದು, ಸ್ಕ್ರೀನ್ ರೀಡರ್ ಅಪ್ಲಿಕೇಶನ್, ಡಿಜಿಟಲ್ ಟೆಕ್ಸ್ಟ್ ಬುಕ್, ಹಾಗೂ ಇತರ ಸಾಫ್ಟ್ ವೇರ್ ಬಳಸಿ ತನ್ನ ಅಂಧತ್ವವನ್ನು ಮೆಟ್ಟಿ ನಿಂತಿದ್ದಾನೆ. ಸಹಪಾಠಿಗಳು ನೋಟ್ ಬುಕ್ ‍ಗಳಲ್ಲಿ ಪಾಠ ಬರೆಯುತ್ತಿದ್ದರೆ ಹಾರೂನ್ ಕಂಪ್ಯೂಟರ್‍ ನಲ್ಲಿ ಬರೆಯುತ್ತಿದ್ದ.

 ಚಕ್ಷುಮತಿ ಎಂಬ ಎನ್‍ಜಿಒ ನಡೆಸುವ ಹಾಗೂ ಹಾರೂನ್ ಮಾರ್ಗದರ್ಶಕರಾಗಿರುವ ರಾಮ್ ಕಮಲ್ ಅವರು ಮುಂದೆ ಹಾರೂನ್ ‍ನನ್ನು ಕೋಯಿಕ್ಕೋಡ್‍ನ ದಿ ವೈಟ್ ಸ್ಕೂಲ್ ಇಂಟರ್‍ನ್ಯಾಷನಲ್‍ ಗೆ ದಾಖಲಿಸುವ ಇಂಗಿತ ಹೊಂದಿದ್ದಾರೆ. ಹಾರೂನ್ ಸ್ಟ್ಯಾನ್‍ ಫೋರ್ಡ್ ವಿವಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರಿಂಗ್ ಕಲಿಯುವ ಮಹತ್ವಾಕಾಂಕ್ಷೆ ಹೊಂದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News