ಕೊರೋನ ಬಿಕ್ಕಟ್ಟಿನ ನಡುವೆ ಮದುವೆ: ಮದುಮಗನ ಕುಟುಂಬಕ್ಕೆ 6.26 ಲಕ್ಷ ರೂ. ದಂಡ

Update: 2020-07-01 15:48 GMT

 ಜೈಪುರ, ಜು.1: ರಾಜಸ್ತಾನದಲ್ಲಿ ಕೊರೋನ ಸೋಂಕಿನ ನಡುವೆಯೇ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ಏರ್ಪಡಿಸಿದ್ದ ಮದುಮಗನ ಕುಟುಂಬದವರು ಈಗ ಅನಿರೀಕ್ಷಿತ ವೆಚ್ಚ ಭರಿಸಬೇಕಾಗಿದೆ. ಕೊರೋನ ವೈರಸ್ ಸುರಕ್ಷಾ ನಿಯಮ ಉಲ್ಲಂಘಿಸಿದ್ದಕ್ಕೆ ಕುಟುಂಬದ ಮೇಲೆ 6.26 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮದುವೆಯಲ್ಲಿ ಪಾಲ್ಗೊಂಡಿದ್ದ 16 ಮಂದಿಗೆ ಸೋಂಕು ತಗುಲಿದ್ದು ಓರ್ವ ಮೃತಪಟ್ಟಿದ್ದಾನೆ. ಇದೀಗ 6.26 ಲಕ್ಷ ರೂ. ದಂಡದ ಜೊತೆಗೆ, ಮೃತ ವ್ಯಕ್ತಿ ಸೇರಿದಂತೆ 16 ಮಂದಿಯ ಚಿಕಿತ್ಸೆಯ ವೆಚ್ಚ, 58 ಅತಿಥಿಗಳ ಕ್ವಾರಂಟೈನ್ ವೆಚ್ಚ, ಅವರ ಆಹಾರ, ಆಸ್ಪತ್ರೆಗೆ ಸಾಗಿಸಿದ ಆ್ಯಂಬುಲೆನ್ಸ್ ವೆಚ್ಚ, ಪರೀಕ್ಷೆಯ ವೆಚ್ಚವನ್ನು ವರನ ಕುಟುಂಬದವರು ಪಾವತಿಸಬೇಕು ಎಂದು ಸರಕಾರ ಸೂಚಿಸಿದೆ.

ಭಿಲ್ವಾರಾದ ಭದಾದ ಪ್ರದೇಶದಲ್ಲಿ ಜೂನ್ 13ರಂದು ಈ ವಿವಾಹ ನಡೆದಿದೆ. ವರನ ತಂದೆ ನಗರದ ಖ್ಯಾತ ಉದ್ಯಮಿಯಾಗಿದ್ದು ವಿವಾಹದ ಸಂದರ್ಭ ಮಾಸ್ಟ್, ಸ್ಯಾನಿಟೈಸರ್ಸ್, ಸುರಕ್ಷಿತ ಅಂತರ ಸೇರಿದಂತೆ ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದರು. ಮದುವೆಯಲ್ಲಿ ಪಾಲ್ಗೊಂಡಿದ್ದ ಓರ್ವ ಅತಿಥಿಗೆ ಕೊರೋನ ಪಾಸಿಟಿವ್ ಎಂದು ಜೂನ್ 19ರಂದು ಅಧಿಕಾರಿಗಳಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಸಂಪರ್ಕ ಪತ್ತೆ ಹಚ್ಚಿದಾಗ ವಧು, ವರ, ವರನ ತಂದೆ ಮತ್ತು ಅಜ್ಜನ ಸಹಿತ 16 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ ಅಜ್ಜ ಮೃತಪಟ್ಟಿದ್ದಾರೆ. ಅಲ್ಲದೆ 58 ಅತಿಥಿಗಳಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಿರುವ ಬಗ್ಗೆ ತಿಳಿದು ಬಂದಿದೆ.

50ಕ್ಕಿಂತ ಹೆಚ್ಚು ಅತಿಥಿಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದರೂ 1000ಕ್ಕೂ ಅಧಿಕ ಅತಿಥಿಗಳು ವಿವಾಹದಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭಿಲ್ವಾರಾ ಜಿಲ್ಲಾಧಿಕಾರಿ ವರನ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿ ದಂಡ ವಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News