ತಂದೆ-ಮಗನ ಕಸ್ಟಡಿ ಸಾವಿನ ಘಟನೆಗೆ ರಜನಿಕಾಂತ್ ತೀವ್ರ ಖಂಡನೆ

Update: 2020-07-01 16:17 GMT

ಚೆನ್ನೈ,ಜು.1: ತೂತ್ತುಕುಡಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ನಡೆದಿದೆಯೆನ್ನಲಾದ ತಂದೆ ಮಗನ ಬರ್ಬರ ಹತ್ಯೆಯ ಘಟನೆಯನ್ನು ಖ್ಯಾತ ನಟ-ರಾಜಕಾರಣಿ ರಜನಿಕಾಂತ್ ಬುಧವಾರ ತೀವ್ರವಾಗಿ ಖಂಡಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜೊತೆ ಕೆಲವು ಪೊಲೀಸ್ ಅಧಿಕಾರಿಗಳ ದುರ್ವರ್ತನೆಯು ತನಗೆ ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

  ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಜಯರಾಜ್ ಹಾಗೂ ಅವರ ಪುತ್ರ ಬೆನಿಕ್ಸ್ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಪೊಲೀಸರ ಚಿತ್ರಹಿಂಸೆಯಿಂದ ಮೃತಪಟ್ಟಿದ್ದಾರೆನ್ನಲಾದ ಘಟನೆಯ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶವನ್ನು ಸೃಷ್ಟಿಸಿತ್ತು. ಪ್ರಕರಣದ ತನಿಖೆಗೆ ಅಡ್ಡಿಪಡಿಸಲು ಪೊಲೀಸರು ಯತ್ನಿಸಿದ್ದಾರೆಂದು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆರೋಪಿಸಿದ ಬಳಿಕ ಸೋಮವಾರ ಮದ್ರಾಸ್ ಹೈಕೋರ್ಟ್ ಉಪಪೊಲೀಸ್ ಅಧೀಕ್ಷಕ ಸಿ.ಪ್ರತಾಪನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಿ. ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸುವಂತೆ ಆದೇಶಿಸಿತ್ತು.

 ‘‘ಚಿತ್ರಹಿಂಸೆ ನೀಡಿ ತಂದೆ ಹಾಗೂ ಮಗನ ಬರ್ಬರ ಹತ್ಯೆಯನ್ನು ಸಮಸ್ತ ಮಾನವಕುಲ ವಿರೋಧಿಸಿದೆ. ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಪೊಲೀಸರ ದುರ್ವರ್ತನೆ ಹಾಗೂ ಅವರು ಮಾತನಾಡಿದ ರೀತಿಯು ತನಗೆ ಆಘಾತವುಂಟು ಮಾಡಿದೆ ಎಂದು ರಜನಿ ತಮಿಳಿನಲ್ಲಿ ಟ್ವೀಟಿಸಿದ್ದಾರೆ. ಈ ಘಟನೆಯಲ್ಲಿ ಶಾಮೀಲಾದವರಿಗೆ ಸೂಕ್ತವಾದ ಶಿಕ್ಷೆಯಾಗಬೇಕಿದೆ ಎಂದು ರಜನಿ ಅವರು, “ಸತ್ಯಮಾ ವಿಡವೇ ಕೂಡಾದು” (ಯಾವುದೇ ಬೆಲೆ ತೆತ್ತಾದರೂ ಸತ್ಯವನ್ನು ಬಿಡಲೇಬಾರದು) ಎಂದು ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವಿಟೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News