ದೂರು ನೀಡಲು ಬಂದ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿದ ಅಧಿಕಾರಿ!

Update: 2020-07-01 16:53 GMT

ಲಕ್ನೊ, ಜು.1: ದೂರು ನೀಡಲು ಬಂದಿದ್ದ ಮಹಿಳೆಯೆದುರು ಠಾಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಹಸ್ತಮೈಥುನ ಮಾಡಿಕೊಂಡ ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಆತ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಅಧಿಕಾರಿಯನ್ನು ಪತ್ತೆಹಚ್ಚಿದವರಿಗೆ ಪೊಲೀಸ್ ಇಲಾಖೆ 25,000 ರೂ. ಬಹುಮಾನ ಘೋಷಿಸಿದೆ.

ಈ ಹಿಂದೆ ಬೇರೊಂದು ಪ್ರಕರಣದಲ್ಲಿ ಅಮಾನತು ಶಿಕ್ಷೆ ಅನುಭವಿಸಿದ್ದ ಭೀಷ್ಮ್‌ಪಾಲ್ ಸಿಂಗ್ ಎಂಬಾತ ಈ ಕೃತ್ಯ ಎಸಗಿದ್ದು ಈತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದಿಯೋರಿಯಾ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಪ್ರಕರಣವೊಂದರ ಬಗ್ಗೆ ದೂರು ದಾಖಲಿಸಬೇಕೆಂದು ಕೋರಿ ಮಹಿಳೆ ತನ್ನ ಹೆತ್ತವರೊಂದಿಗೆ ಹಲವು ಬಾರಿ ಠಾಣೆಗೆ ಭೇಟಿ ನೀಡಿದ್ದರೂ ಸಿಂಗ್ ಎಫ್‌ಐಆರ್ ದಾಖಲಿಸಲು ನೆವ ಹೇಳುತ್ತಿದ್ದ ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಒಬ್ಬಂಟಿಯಾಗಿ ಠಾಣೆಗೆ ತೆರಳಿ ದೂರಿನ ಬಗ್ಗೆ ವಿಚಾರಿಸಿದಾಗ ಸಿಂಗ್ ಮತ್ತೆ ಅಸಭ್ಯವಾಗಿ ವರ್ತಿಸಿ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಆತನ ಈ ಕೃತ್ಯವನ್ನು ಮೊಬೈಲ್‌ನಲ್ಲಿ ದಾಖಲಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದೇನೆ ಎಂದು ಮಹಿಳೆ ವಿವರಿಸಿದ್ದಾರೆ. ಪ್ರಕರಣ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಆತನನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಿಯೋರಿಯಾ ಪೊಲೀಸ್ ಅಧೀಕ್ಷಕ ಶ್ರೀಪತಿ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News