ಬಿಹಾರದ ಎನ್‌ಡಿಎ ಮೈತ್ರಿಕೂಟದಲ್ಲಿ ಒಡಕು

Update: 2020-07-02 09:28 GMT

ಹೊಸದಿಲ್ಲಿ, ಜು.2:ಬಿಹಾರದಲ್ಲಿ ಎರಡು ಪ್ರಮುಖ ಪಕ್ಷಗಳಾದ ಸಂಯುಕ್ತ ಜನತಾದಳ(ಜೆಡಿಯು) ಹಾಗೂ ಲೋಕಜನಶಕ್ತಿ ಪಕ್ಷಗಳ ನಡುವೆ ಭಿನ್ನಮತ ಬಿಗಡಾಯಿಸುತ್ತಿದ್ದು, ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಎರಡೂ ಪಕ್ಷಗಳ ಭಿನ್ನಮತ ಶಮನಗೊಳಿಸಲು ಪರದಾಡುತ್ತಿದೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಲೋಕ ಜನಶಕ್ತಿ ಪಾರ್ಟಿಯ ಚಿರಾಗ್ ಪಾಸ್ವಾನ್ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿದೆ.

 ಚಿರಾಗ್ ಪಾಸ್ವಾನ್ ಅವರ ತಂದೆ ರಾಮವಿಲಾಸ್ ಪಾಸ್ವಾನ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದಾರೆ. ಆದರೆ,ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಒಗ್ಗಟ್ಟಾಗಿದೆ ಎಂದು ಹೇಳಿಕೆ ನೀಡಿದ್ದ ಮುಂಗೇರ್ ಜಿಲ್ಲಾಧ್ಯಕ್ಷನನ್ನು ವಜಾಗೊಳಿಸಿದ ಚಿರಾಗ್ ಪಾಸ್ವಾನ್ ಎರಡು ಸ್ಥಳೀಯ ಪಕ್ಷಗಳ ನಡುವಿನ ಬಿಕ್ಕಟ್ಟನ್ನು ಹೆಚ್ಚಿಸಿದರು.

ಜಿಲ್ಲಾಧ್ಯಕ್ಷರ ಹೇಳಿಕೆ ಪಕ್ಷಕ್ಕೆ ವಿರುದ್ಧವಾದುದು. ಕೇವಲ ಲೋಕಜನಶಕ್ತಿ ಪಕ್ಷದ ಅಧ್ಯಕ್ಷರು ಮಾತ್ರ ಇಂತಹ ಹೇಳಿಕೆ ನೀಡಬೇಕು ಎಂದು ಜಿಲ್ಲಾಧ್ಯಕ್ಷನ ವಜಾಗೊಳಿಸಿದ ಪತ್ರದಲ್ಲಿ ತಿಳಿಸಲಾಗಿದೆ.

ರಾಜ್ಯಪಾಲರ ಕೋಟಾದಿಂದ ಭರ್ತಿ ಮಾಡಲ್ಪಡುವ 12 ಶಾಸಕಾಂಗ ಪರಿಷತ್ತಿನ ಸ್ಥಾನಗಳಲ್ಲಿ ಎರಡನ್ನು ತನ್ನ ಪಕ್ಷಕ್ಕೆ ನೀಡಬೇಕೆಂದು ಚಿರಾಗ್ ಪಾಸ್ವಾನ್ ಬೇಡಿಕೆ ಇಟ್ಟಿದ್ದಾರೆ ಎಂದು ಎಲ್‌ಜೆಪಿ ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ರಚಿಸಿದ ಸೀಟು ಹಂಚಿಕೆ ಸೂತ್ರದಂತೆ 5,5,2 ಸೀಟುಗಳನ್ನು ನೀಡಬೇಕೆಂದು ಬಿಜೆಪಿ ನಾಯಕರಿಗೆ ಚಿರಾಗ್ ಮನವರಿಕೆ ಮಾಡಿದ್ದಾರೆ.

12 ಸೀಟುಗಳ ಪೈಕಿ 7 ಸೀಟುಗಳು ನಿತೀಶ್‌ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ ಹಾಗೂ ಉಳಿದ ಸೀಟುಗಳು ಬಿಜೆಪಿಯ ಪಾಲಾಗಲಿದೆ ಎಂದು ತಿಳಿದು ಬಂದಿದೆ.

ಜೆಡಿಯು ತನ್ನ ನಿಲುವಿಗೆ ಬದ್ಧವಾಗಿದ್ದು, ಅಸೆಂಬ್ಲಿ ಚುನಾವಣೆಯಲ್ಲ್ಲಿ ಯಾವುದೇ ಸೀಟು ಹಂಚಿಕೆ ಸೂತ್ರ ಇರುವುದಿಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News