ಹೆಚ್ಚುತ್ತಿರುವ ಕೊರೋನ ಪ್ರಕರಣ : ದ.ಕ.ಜಿಲ್ಲೆಯ ಹಲವೆಡೆ ಸ್ವಯಂ ಪ್ರೇರಿತ ನಿರ್ಬಂಧ

Update: 2020-07-02 15:04 GMT

ಮಂಗಳೂರು, ಜು. 2: ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕು ಹೆಚ್ಚುತ್ತಿವೆ. ಮಾ. 22ಕ್ಕೆ ದ.ಕ.ಜಿಲ್ಲೆಯಲ್ಲಿ ಪ್ರಥಮ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ (ಜು.2)ಗುರುವಾರದವರೆಗೆ ಬೆಳಕಿಗೆ ಬಂದ ಪ್ರಕರಣಗಳ ಸಂಖ್ಯೆ 923. ಆ ಪೈಕಿ 18 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಾಗ ಲಾಕ್‌ಡೌನ್ ಪ್ರಕ್ರಿಯೆ ಆರಂಭಗೊಂಡಿತ್ತು. ಜೂನ್ ಮೊದಲ ವಾರದವರೆಗೂ ಇದು ನಿಯಂತ್ರಣದಲ್ಲಿತ್ತು. ಆದರೆ, ಲಾಕ್‌ಡೌನ್ ಸಡಿಲಿಕೆಯಾಗಿ ಹೊರ ರಾಜ್ಯ ಮತ್ತು ವಿದೇಶದಿಂದ ಜನರ ಪ್ರವೇಶಕ್ಕೆ ಅನುಮತಿ ನೀಡುತ್ತಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿತ್ತು. ಆ ಪೈಕಿ ಹೆಚ್ಚಿನವುಗಳು ಕ್ವಾರಂಟೈನ್ ಕೇಂದ್ರದಿಂದ ವರದಿಯಾದ ಕಾರಣ ಜನರು ಹೆಚ್ಚು ಆತಂಕಿತರಾಗಿಲ್ಲ. ಇತ್ತೀಚಿಗೆ ದಿನಂಪ್ರತಿ ಸುಮಾರು 90ರಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ.

ಆರಂಭದಲ್ಲಿ ಒಂದು ವಲಯಾದ್ಯಂತ ಸೀಲ್‌ಡೌನ್ ಮಾಡಲಾಗುತ್ತಿದ್ದರೆ ಇದೀಗ ಪಾಸಿಟಿವ್ ಪ್ರಕರಣ ಬೆಳಕಿಗೆ ಬರುವ ಮನೆಗಳಲ್ಲಿ ಮಾತ್ರ ಸೀಲ್‌ಡೌನ್ ಮಾಡಲಾಗುತ್ತದೆ. ಸದ್ಯ ಲಾಕ್‌ಡೌನ್ ಇಲ್ಲ. ಮುಂಜಾಗ್ರತಾ ಕ್ರಮವಾಗಿ ರಾತ್ರಿ 8ರಿಂದ ಮುಂಜಾನೆ 5ರವರೆಗೆ ಕರ್ಫ್ಯೂ ವಿಧಿಸಲಾಗಿದೆ.

ದ.ಕ.ಜಿಲ್ಲಾಧಿಕಾರಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಕಚೇರಿ ಹಾಗೂ ಲೇಡಿಗೋಷನ್ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್‌ಡೌನ್ ಹೇರಬಹುದು ಎಂದು ನಿರೀಕ್ಷಿಸಿದ್ದ ಸಾರ್ವಜನಿಕರು, ಸಂಘಸಂಸ್ಥೆಗಳು ಇದೀಗ ಸ್ವಯಂ ಪ್ರೇರಿತರಾಗಿ ನಿರ್ಬಂಧಕ್ಕೊಳಗಾಗುತ್ತಿದ್ದಾರೆ.

ಜೂ.29ರಿಂದ ಕೆಲವು ಮಂದಿ ಆರಂಭಿಸಿದ್ದ ಸ್ವಯಂ ಪ್ರೇರಿತ ನಿರ್ಬಂಧವು ಇದೀಗ ಸಾಮೂಹಿಕವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಜಾಗೃತಿ, ಮನವಿ ಮಾಡಲಾಗುತ್ತಿದೆ. ಮಂಗಳೂರು ನಗರ ಮಾತ್ರವಲ್ಲ ಜಿಲ್ಲೆಯ ವಿವಿಧ ಜಂಕ್ಷನ್, ತಾಲೂಕು ಕೇಂದ್ರಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗುತ್ತಿವೆ. ಜಿಲ್ಲೆಯಲ್ಲಿ ಸುಮಾರು 150ರಷ್ಟು ಬಸ್‌ಗಳು ಓಡಾಟ ಆರಂಭಿಸಿದ್ದರೂ ಕೂಡ ಸಂಜೆಯ ಬಳಿಕ ಟ್ರಿಪ್ ಕಡಿತಗೊಳಿಸುತ್ತಿದೆ. ಬಾಡಿಗೆ ರಿಕ್ಷಾಗಳ ಸಂಚಾರವೂ ಕಡಿಮೆಯಾಗಿದೆ. ಕೆಲವು ಜವುಳಿ-ಚಪ್ಪಲಿ ಮಳಿಗೆಗಳು, ಚಿನ್ನ-ವಜ್ರದ ಆಭರಣ ಮಳಿಗೆಗಳು ಮುಚ್ಚಲ್ಪಡುತ್ತಿವೆ. ಖಾಸಗಿ ಕಚೇರಿಗಳಲ್ಲಿ ಕೂಡ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿಮೆ ಕಂಡು ಬರುತ್ತಿವೆ. ತೆರೆಯಲ್ಪಟ್ಟ ಪ್ರಾರ್ಥನಾ ಕೇಂದ್ರಗಳು ಕೂಡ ಬಾಗಿಲೆಳೆಯುತ್ತಿವೆ. ಕೊರೋನ ಸೋಂಕು ಸಮಾಜಕ್ಕೆ ಹಬ್ಬಿದ ಕಾರಣ ಮನೆಯಲ್ಲೇ ಇರುವುದು ಕ್ಷೇಮ ಎಂದು ಬಗೆದ ಸಾರ್ವಜನಿಕರು ಸರಕಾರದ ಆದೇಶಕ್ಕೆ ಕಾಯದೆ ಸ್ವಯಂ ಆಗಿ ನಿರ್ಬಂಧಗೊಳಗಾಗುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯ ಜನರಲ್ಲಿ ಒಂದೆಡೆ ಆತಂಕ, ಇನ್ನೊಂದೆಡೆ ಜಾಗೃತಿ, ಮತ್ತೊಂದೆಡೆ ನಿರ್ಲಕ್ಷವೂ ಎದ್ದು ಕಾಣುತ್ತಿವೆ.

ಜನರ ನಿರ್ಲಕ್ಷ-ಮಾಸ್ಕ್ ಧರಿಸದೆ ಓಡಾಟ

ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡ ಕೆಲವು ಮಂದಿಯ ನಿರ್ಲಕ್ಷವೂ ಆಶ್ಚರ್ಯ ಹುಟ್ಟಿಸುತ್ತಿವೆ. ಮಾಸ್ಕ್ ಧರಿಸುವುದನ್ನು ಸರಕಾರ ಕಡ್ಡಾಯಗೊಳಿಸಿದ್ದರೂ ಕೂಡ ಜನರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಕರಣ ಹೆಚ್ಚುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮುನ್ನೆಚ್ಚರಿಕೆ ವಹಿಸಿದಷ್ಟು ಸಾಕಾಗದು. ಮಾಸ್ಕ್ ಧರಿಸುವುದರಿಂದ ಎದುರಿರುವ ವ್ಯಕ್ತಿಗೆ ಕೊರೋನ ಹರಡುವುದು ಅಥವಾ ಆ ವ್ಯಕ್ತಿಯಿಂದ ಮಾಸ್ಕ್ ಧರಿಸಿದ ವ್ಯಕ್ತಿಗೆ ಹರಡುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಆದರೆ ನಗರ ಸಹಿತ ಎಲ್ಲೆಡೆ ಜನರು ಮಾಸ್ಕ್‌ನ ಅಗತ್ಯತೆಯನ್ನು ಮನಗಂಡಂತಿಲ್ಲ.

''ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂಬುದನ್ನು ಸರಕಾರವೇ ಹೇಳಿದೆ. ಕೊರೋನ ಹರಡುವುದನ್ನು ತಡೆಯುವಲ್ಲಿ ಮಾಸ್ಕ್ ಪ್ರಮುಖ ಪಾತ್ರ ವಹಿಸುತ್ತದೆ. ಮಾಸ್ಕ್ ಧರಿಸದೆ ಯಾರೂ ಹೊರ ಬರಬಾರದು. ದಂಡ ಹಾಕಿ ಸರಿ ದಾರಿಗೆ ತರುವಂತಹ ಪ್ರಕ್ರಿಯೆ ಅಲ್ಲ ಇದು. ಜನರೇ ಅರಿತುಕೊಂಡು ಸ್ವಯಂ ಜಾಗೃತಿ ಮೆರೆಯಬೇಕು''.
- ಡಾ. ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News