ಫಲಿತಾಂಶಕ್ಕೆ ಕಾಯದೆ ಶಂಕಿತ ಕೋವಿಡ್-19 ರೋಗಿಗಳ ಮೃತದೇಹ ಬಂಧುಗಳಿಗೆ ಹಸ್ತಾಂತರ: ಆರೋಗ್ಯ ಸಚಿವಾಲಯ

Update: 2020-07-02 16:55 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜು.2: ಶಂಕಿತ ಕೋವಿಡ್-19 ಪ್ರಕರಣಗಳಲ್ಲಿ ಮೃತರ ಮೃತದೇಹಗಳನ್ನು ಲ್ಯಾಬ್‌ಗಳಿಂದ ಸೋಂಕಿನ ದೃಢೀಕರಣಕ್ಕಾಗಿ ಕಾಯದೇ ತಕ್ಷಣ ಅವರ ಬಂಧುಗಳಿಗೆ ಹಸ್ತಾಂತರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ಆದರೆ ಮೃತದೇಹಗಳ ಅಂತ್ಯಸಂಸ್ಕಾರ ಸರಕಾರದ ಮಾರ್ಗಸೂಚಿಗಳ ಅನುಗುಣವಾಗಿಯೇ ನಡೆಯಬೇಕೆಂದು ಅದು ಸ್ಪಷ್ಟಪಡಿಸಿದೆ.

ಶಂಕಿತ ಕೋವಿಡ್-19 ರೋಗಿಗಳ ಸಾವು ಮತ್ತು ಪರೀಕ್ಷಾ ವರದಿಗಳು ಬಂದ ಹೊರತು ಬಂಧುಗಳಿಗೆ ಮೃತದೇಹಗಳನ್ನು ಹಸ್ತಾಂತರಿಸದಿರುವ ಬಗ್ಗೆ ವಿವಾದಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಡಾ.ರಾಜೀವ ಗರ್ಗ್ ಅವರು ಬುಧವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಈ ನಿರ್ದೇಶವನ್ನು ನೀಡಿದ್ದಾರೆ.

ಸರಕಾರದ ಮಾರ್ಗಸೂಚಿಯಂತೆ ಅತ್ಯಂತ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮೃತದೇಹಗಳ ಅಂತ್ಯಸಂಸ್ಕಾರವನ್ನು ನಡೆಸಬೇಕು ಮತ್ತು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿಗಳು ಅಂತ್ಯಸಂಸ್ಕಾರದ ಹೊಣೆಯನ್ನು ವಹಿಸಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇಂತಹ ಸಾವುಗಳ ಪ್ರಕರಣಗಳಲ್ಲಿ ಪರೀಕ್ಷಾ ವರದಿಗಳು ಪಾಸಿಟಿವ್ ಆಗಿದ್ದರೆ ಮೃತರ ಸಂಪರ್ಕ ಪತ್ತೆ ಇತ್ಯಾದಿಗಳಿಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News