ಗಂಟಲು ದ್ರವ ಸಂಗ್ರಹಿಸದೆ, ಸಂಗ್ರಹಿಸಲಾಗಿದೆ ಎಂಬ ಸಂದೇಶ ರವಾನೆ !

Update: 2020-07-02 16:47 GMT

ಮಂಗಳೂರು, ಜು.2: ಕೊರೋನ ವೈರಸ್ ಸೋಂಕು ಪ್ರಕರಣಗಳ ವರದಿಗೆ ಸಂಬಂಧಿಸಿದಂತೆ ದ.ಕ.ಜಿಲ್ಲೆಯ ವಿವಿಧ ಕಡೆಯಿಂದ ವ್ಯಕ್ತವಾಗುವ ಅಸಮಾಧಾನ, ಸಂಶಯಗಳಿಗೆ ಪೂರಕ ಎಂಬಂತೆ ಮಂಗಳೂರಿನ ಬಿಕರ್ನಕಟ್ಟೆಯ ಎರಡು ಮನೆಗಳಲ್ಲಿ ವಾಸವಾಗಿರುವ 6 ಮಂದಿಗೆ ಮತ್ತವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಗೆ ಬಂದ ಸಂದೇಶವು ಸಾಕ್ಷಿಯಾಗಿವೆ.

ಬಿಕರ್ನಕಟ್ಟೆಯ ಒಂದು ಮನೆಯಲ್ಲಿ ಎರಡು ಪ್ರತ್ಯೇಕ ಕುಟುಂಬವು ವಾಸಿಸುತ್ತಿವೆ. ಆ ಪೈಕಿ ಇಬ್ಬರು ಯುವಕರಿಗೆ ಜೂ. 25 ಮತ್ತು 30ರಂದು ಬಂದ ವರದಿಯಲ್ಲಿ ಕೊರೋನ ಪಾಸಿಟಿವ್ ಬಂದಿದೆ. ಆ ಬಳಿಕ ಈ ಮನೆಯಲ್ಲಿ ವಾಸವಾಗಿರುವ 6 ಮಂದಿ ಮತ್ತು ಅಲ್ಲಿ ಕೆಲಸ ಮಾಡುವ ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದರು. ಆದರೆ ಜು.2ರ ಸಂಜೆಯವರೆಗೂ ಈ 8 ಮಂದಿಯ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿಲ್ಲ. ವಿಪರ್ಯಾಸವೇನೆಂದರೆ ಇವರೆಲ್ಲರಿಗೂ ಸಂಬಂಧಪಟ್ಟವರಿಂದ ‘ನಿಮ್ಮ ಗಂಟಲಿನ ದ್ರವದ ಸ್ಯಾಂಪಲ್ ಸಂಗ್ರಹಿಸಲಾಗಿದೆ’ ಎಂಬ ಸಂದೇಶ ಬಂದಿದೆ. ಇದರಿಂದ ಮನೆಮಂದಿ ತೀವ್ರ ಆತಂಕರಾಗಿದ್ದಾರೆ. ಗಂಟಲಿನ ದ್ರವದ ಮಾದರಿಯನ್ನೇ ಸಂಗ್ರಹಿಸಿಲ್ಲ. ಆದಾಗ್ಯೂ ಇಂತಹ ಸಂದೇಶ ಹೇಗೆ ಬಂತು ? ಒಬ್ಬರ ದ್ರವದ ಮಾದರಿಯ ವರದಿಯನ್ನು ಇನ್ಯಾರಿಗೋ ನೀಡುತ್ತಾರೋ ಎಂದು ಅವರು ಪ್ರಶ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ ಕೋವಿಡ್ -19 ಪರೀಕ್ಷಾ ವರದಿಯ ಬಗ್ಗೆ ಕೇಳಿ ಬರುವ ಊಹಾಪೋಹಗಳಿಗೆ ಈ ಆರೋಪ, ಸಂಶಯ ಪುಷ್ಟಿ ನೀಡುತ್ತಿದೆ. ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆಯೇ ಸಾರ್ವಜನಿಕರ ಸಂಶಯವನ್ನು ನಿವಾರಿಸಬೇಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News