ಒಳಚರಂಡಿ ಸ್ವಚ್ಛಗೊಳಿಸಲು ಸೆಪ್ಟಿಕ್ ಟ್ಯಾಂಕ್‍ ಗೆ ಇಳಿದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಮೃತ್ಯು

Update: 2020-07-03 11:29 GMT

ತೂತುಕುಡಿ (ತಮಿಳುನಾಡು): ಒಳಚರಂಡಿ ಸ್ವಚ್ಛಗೊಳಿಸಲು ಸೆಪ್ಟಿಕ್ ಟ್ಯಾಂಕ್‍ ಗೆ ಇಳಿದ ನಾಲ್ವರು ಜಾಡಮಾಲಿಗಳು ಉಸಿರುಗಟ್ಟಿ ಮೃತಪಟ್ಟ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ. ಮೃತಪಟ್ಟ ಎಲ್ಲರೂ 20-24 ವರ್ಷ ವಯಸ್ಸಿನವರಾಗಿದ್ದು, ಮನೆಯ ಮಾಲಕನ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಮೃತಪಟ್ಟ ಪಾಂಡಿ (24), ಇಸಾಕಿರಾಜ (20), ಬಾಲಾ (20) ಮತ್ತು ದಿನೇಶ್ (20) ಪಕ್ಕದ ತಿರುನಲ್ವೇಲಿ ಜಿಲ್ಲೆಯ ವೀರವನಲ್ಲೂರಿನವರು. ಪಾಂಡಿ, ಇಸಾಕಿರಾಜ ಮತ್ತು ಬಾಲಾ ಜಾಡಮಾಲಿಗಳಾಗಿದ್ದರೆ, ದಿನಗೂಲಿಯಾಗಿದ್ದ ದಿನೇಶ್ ಕೊರೊನ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಇವರೊಂದಿಗೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕೀಲ ಚೆಕ್ಕರಕುಡಿಯ ಸೋಮಸುಂದರಮ್ (65) ಎಂಬಾತ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇವರನ್ನು ಕರೆಸಿದ್ದ. ಮಧ್ಯಾಹ್ನ 2 ಗಂಟೆ ವೇಳೆಗೆ ಎರಡು ಸುತ್ತು ಸ್ವಚ್ಛಗೊಳಿಸಲಾಗಿತ್ತು. ಆಗ ಒಬ್ಬ ಪ್ರಜ್ಞೆ ಕಳೆದುಕೊಂಡ. ಪ್ರಜ್ಞೆ ಕಳೆದುಕೊಂಡಿದ್ದನ್ನು ನೋಡಿದ ಇತರರು ಆತನನ್ನು ರಕ್ಷಿಸುವ ಸಲುವಾಗಿ ಟ್ಯಾಂಕ್‍ ಗೆ ಇಳಿದರು. ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.

ವಿಷಾನಿಲ ಸೇವಿಸಿ ಅವರು ಮೃತಪಟ್ಟಿದ್ದಾಗಿ ತನಿಖಾಧಿಕಾರಿ ಹೇಳಿದ್ದಾರೆ. 2:30ರ ವೇಳೆಗೆ ಅವರು ಮೃತಪಟ್ಟಿದ್ದರು. ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬದವರ ಹೇಳಿಕೆ ಆಧರಿಸಿ ಗುರುವಾರ ರಾತ್ರಿ ಎಫ್‍ ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News