2 ವರ್ಷಗಳ ಹಿಂದೆ ದೇಶ ಬಿಟ್ಟ ಉದ್ಯಮಿಯಿಂದ ಬ್ಯಾಂಕ್ ಗಳಿಗೆ 350 ಕೋಟಿ ರೂ. ವಂಚನೆ: ವರದಿ

Update: 2020-07-03 12:14 GMT

ಹೊಸದಿಲ್ಲಿ: ಪಂಜಾಬ್ ಬಾಸ್ಮತಿ ರೈಸ್ ಲಿಮಿಟೆಡ್‍ನ ನಿರ್ದೇಶಕ ಮಂಜೀತ್ ಸಿಂಗ್ ಮಖ್ನಿ, ಕೆನರಾ ಬ್ಯಾಂಕ್ ನೇತೃತ್ವದ ಆರು ಬ್ಯಾಂಕ್‍ ಗಳ ಒಕ್ಕೂಟಕ್ಕೆ 350 ಕೋಟಿ ರೂಪಾಯಿ ವಂಚಿಸಿ ದೇಶದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಆಪಾದಿಸಿದ್ದಾರೆ ಎಂದು ndtv.com ವರದಿ ಮಾಡಿದೆ. ಮಂಜೀತ್ ಈಗ ಕೆನಡಾದಲ್ಲಿದ್ದಾರೆ ಎನ್ನಲಾಗಿದೆ.

ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸಿಬಿಐ ಅಧಿಕಾರಿಗಳು ಅಮೃತಸರ ಮೂಲದ ಉದ್ಯಮಿ ಮಂಜೀತ್ ಸಿಂಗ್ ಮಖ್ನಿ, ಮಗ ಕುಲ್ವೀಂದರ್ ಸಿಂಗ್ ಮಖ್ನಿ, ಸೊಸೆ ಜಸ್ಮೀತ್ ಕೌರ್ ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಆರು ಬ್ಯಾಂಕ್‍ಗಳಿಗೆ ವಂಚಿಸಿದ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ಎಫ್‍ಐಆರ್ ಪ್ರಕಾರ ಕೆನರಾ ಬ್ಯಾಂಕ್‍ ಗೆ 175 ಕೋಟಿ, ಆಂಧ್ರ ಬ್ಯಾಂಕ್‍ ಗೆ 53 ಕೋಟಿ, ಯುಬಿಐಗೆ 44ಕೋಟಿ, ಓಬಿಸಿಗೆ 25 ಕೋಟಿ, ಐಡಿಬಿಐಗೆ 14 ಕೋಟಿ ಮತ್ತು ಯೂಕೊ ಬ್ಯಾಂಕ್‍ ಗೆ 41 ಕೋಟಿ ರೂಪಾಯಿ ಬಾಕಿ ಇದೆ.

2003ರಿಂದ ಪಂಜಾಬ್ ಬಾಸ್ಮತಿ ರೈಸ್ ಲಿಮಿಟೆಡ್ ಸಾಲ ಸೌಲಭ್ಯ ಪಡೆದಿತ್ತು ಎಂದು ಕೆನರಾ ಬ್ಯಾಂಕ್ ನೀಡಿದ ದೂರಿನಲ್ಲಿ ವಿವರಿಸಿದೆ. ಬಳಿಕ ಒಕ್ಕೂಟ ವ್ಯವಸ್ಥೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಬಾಕಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ 2018ರ ಏಪ್ರಿಲ್ 25ರಂದು, ಆಂಧ್ರ ಬ್ಯಾಂಕ್ 31.03.2018ರಂದು, ಓಬಿಸಿ 27.06.2018ರಂದು, ಐಡಿಬಿಐ 31.03.2018ರಂದು, ಯುಬಿಐ 30.04.2018ರಂದು ಮತ್ತು ಯೂಕೊ ಬ್ಯಾಂಕ್ 31.03.2018ರಂದು ಇದನ್ನು ಅನುತ್ಪಾದಕ ಆಸ್ತಿ ಎಂದು ವರ್ಗೀಕರಿಸಿದ್ದವು ಎಂದು ಎಫ್‍ಐಆರ್ ಹೇಳಿದೆ. ಕಳೆದ ಮಾರ್ಚ್‍ನಲ್ಲಿ ಈ ಬಗ್ಗೆ ಸ್ವಯಂ ತನಿಖೆ ನಡೆಸಿದ ಬ್ಯಾಂಕ್ ಇದನ್ನು ಆರ್ ಬಿಐ ಗಮನಕ್ಕೆ ತಂದಿತ್ತು. ಕಳೆದ ಮಾರ್ಚ್‍ ನಲ್ಲಿ ಸಿಬಿಐಗೆ ದೂರು ನೀಡುವಂತೆ ಸೂಚಿಸಲಾಗಿತ್ತು ಎಂದು ndtv.com ವರದಿ ಮಾಡಿದೆ.

ತನಿಖೆ ಆರಂಭವಾಗುವ ಮುನ್ನವೇ 2018ರ ಆರಂಭದಲ್ಲಿ ಮಂಜೀತ್ ಸಿಂಗ್ ಕೆನಡಾಗೆ ತೆರಳಿದ್ದಾರೆ. ಕೆನರಾ ಬ್ಯಾಂಕ್ ನೀಡಿದ ದೂರಿನ ಮೇರೆಗೆ 2018ರ ಸೆಪ್ಟೆಂಬರ್‍ನಲ್ಲಿ ಎಲ್ಲ ಮೂವರು ಆರೋಪಿಗಳ ಪಾಸ್‍ ಪೋರ್ಟ್ ರದ್ದುಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News