ಅನುಪಮ್ ಖೇರ್ ವಿರುದ್ಧ ಸಿಖ್ಖರ ಆಕ್ರೋಶ, ಪ್ರತಿಕೃತಿ ದಹನ

Update: 2020-07-03 12:39 GMT

ಹೊಸದಿಲ್ಲಿ: ಬಿಜೆಪಿ ಮುಖಂಡ ಸಂಬೀತ್ ಪಾತ್ರ ಅವರನ್ನು ಹೊಗಳುವಾಗ ಸಿಖ್ ಧರ್ಮಗುರು ಗುರುಗೋವಿಂದ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಕ್ಕಾಗಿ ಬಾಲಿವುಡ್ ನಟ ಅನುಪಮ್ ಖೇರ್ ವಿರುದ್ಧ ಸಿಖ್ಖರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಖೇರ್ ಅವರ ಟ್ವೀಟ್‍ ಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಜಮ್ಮು ಕಾಶ್ಮೀರದ ಸೋಪುರ್ ಎಂಬಲ್ಲಿ ಇತ್ತೀಚೆಗೆ ಉಗ್ರರ ಗುಂಡಿಗೆ ಬಲಿಯಾದ ತನ್ನ ತಾತನ ಮೃತದೇಹದ ಮೇಲೆ ಕುಳಿತಿದ್ದ ಮಗುವಿನ ಫೋಟೊವೊಂದು ವೈರಲ್ ಆಗಿತ್ತು. ಈ ಫೋಟೊವನ್ನು ಪೋಸ್ಟ್ ಮಾಡಿದ್ದ  ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಇದಕ್ಕೆ “ಪುಲಿಟ್ಜರ್ ಲವರ್ಸ್” ಎಂದು ಶೀರ್ಷಿಕೆ ನೀಡಿದ್ದರು. ಪಾತ್ರಾ ಅವರ ಈ ವಿವಾದಾತ್ಮಕ ಟ್ವೀಟ್ ಗೆ  ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಅನುಪಮ್ ಖೇರ್ , “ಸವಾ ಲಾಖ್ ಸೇ ಏಕ್ ಭಿಂದಾ ದುನ್” ಎಂದು ಬರೆದು, ಪಾತ್ರಾರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಖೇರ್ ಈ ಟ್ವೀಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು.  ಸಿಖ್ ಭಾವನೆಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಸಿಖ್ಖರು ಆಕ್ರೋಶ ವ್ಯಕ್ತಪಡಿಸಿದರು. ಕೆಲವೆಡೆ ಖೇರ್ ಫೋಟೊಗಳನ್ನು ದಹಿಸಲಾಯಿತು. ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಆ ಟ್ವೀಟ್ ಡಿಲೀಟ್ ಮಾಡಿದ ಖೇರ್, ಕ್ಷಮೆ ಯಾಚಿಸಿದ್ದಾರೆ.

“ಸವಾ ಲಾಖ್ ಸೇ ಏಕ್ ಭಿಂದಾ ದುನ್”ಎನ್ನುವುದು ಗುರುಗೋವಿಂದ್ ಸಿಂಗ್ ಅವರ ಖ್ಯಾತ ಯುದ್ಧಘೋಷ. 1705ರಲ್ಲಿ ಮೊಘಲರ ವಿರುದ್ಧದ ಎರಡನೇ ಚಮಕೌರ್ ಸಾಹಿಬ್ ಯುದ್ಧದ ವೇಳೆ ಈ ಘೋಷಣೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News