9 ಮಂದಿಯನ್ನು ಹತ್ಯೆಗೈಯುವ ಮುನ್ನ ‘ಜೈ ಶ್ರೀ ರಾಂ’ ಹೇಳುವಂತೆ ಬಲವಂತಪಡಿಸಿದ್ದ ಗಲಭೆಕೋರರು

Update: 2020-07-03 17:04 GMT

ಹೊಸದಿಲ್ಲಿ: ದಿಲ್ಲಿ ಹಿಂಸಾಚಾರದ ವೇಳೆ 9 ಮಂದಿಯನ್ನು ಹತ್ಯೆಗೈಯುವ ಮುನ್ನ ದುಷ್ಕರ್ಮಿಗಳು ಅವರಿಂದ ‘ಜೈ ಶ್ರೀ ರಾಮ್’ ಎಂದು ಹೇಳಲು ಬಲವಂತಪಡಿಸಿದ್ದರು ಎಂದು ದಿಲ್ಲಿ ಪೊಲೀಸರು ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಿಂದ ತಿಳಿದುಬಂದಿದೆ.

ಗಲಭೆಯ ಮಾಹಿತಿಗಳನ್ನು ಹಂಚಿಕೊಳ್ಳಲು ದುಷ್ಕರ್ಮಿಗಳು ವಾಟ್ಸ್ಯಾಪ್ ಗ್ರೂಪ್ ಒಂದನ್ನು ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಮುಸ್ಲಿಮರ ವಿರುದ್ಧ ಪ್ರತೀಕಾರಗೈಯುವ ಸಲುವಾಗಿ ಫೆಬ್ರವರಿ 25ರಂದು ‘ಕಟ್ಟರ್ ಹಿಂದುತ್ ಏಕತಾ’ ಎನ್ನುವ ವಾಟ್ಸ್ಯಾಪ್ ಗ್ರೂಪ್ ಒಂದನ್ನು ರಚಿಸಲಾಗಿತ್ತು. ಪರಸ್ಪರ ಮಾತನಾಡಲು, ಜನರನ್ನು ಕಳುಹಿಸಿಕೊಡಲು, ಶಸ್ತ್ರಾಸ್ತ್ರಗಳ ವ್ಯವಸ್ಥೆ ಮಾಡಲು ಈ ಗ್ರೂಪ್ ಅನ್ನು ಬಳಸಲಾಗಿತ್ತು ಎಂದು ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.

“ಜತಿನ್ ಶರ್ಮಾ, ರಿಷಬ್ ಚೌಧರಿ, ವಿವೇಕ್ ಪಂಚಾಲ್, ಲೋಕೇಶ್ ಸೋಲಂಕಿ, ಪಂಕಜ್ ಶರ್ಮಾ, ಪ್ರಿನ್ಸ್, ಸುಮಿತ್ ಚೌಧರಿ, ಅಂಕಿತ್ ಚೌಧರಿ ಮತ್ತು ಹಿಮಾಂಶು ಠಾಕೂರ್ ಎಂಬವರು ಫೆಬ್ರವರಿ 25ರಿಂದ 25ರವರೆಗೆ ಗಂಗಾ ವಿಹಾರದಲ್ಲಿ ಸಕ್ರಿಯರಾಗಿದ್ದರು. ಇವರು ಭಗೀರಥಿ ವಿಹಾರ್ ಮತ್ತು ಇತರ ಕಡೆಗಳಲ್ಲಿ 9 ಮುಸ್ಲಿಮರನ್ನು ಹತ್ಯೆಗೈದಿದ್ದರು ಮತ್ತು ಹಲವರಿಗ ಗಾಯಗೊಳಿಸಿದ್ದರು. ಅವರು ಗಲಭೆಯಲ್ಲಿ ಸಕ್ರಿಯರಾಗಿದ್ದರು ಮತ್ತು ಮತ್ತೊಂದು ಸಮುದಾಯಕ್ಕೆ ಸೇರಿದ ಜನರ ಮೇಲೆ ದಾಳಿ ನಡೆಸುವುದರಲ್ಲಿ ಸಕ್ರಿಯರಾಗಿದ್ದರು. ಹಲವರ ಮೇಲೆ ದಾಳಿ ನಡೆಸಿ ಅವರನ್ನು ಕೊಂದರು. ಜನರನ್ನು ಹಿಡಿದು ಹೆಸರು, ವಿಳಾಸ ಮತ್ತು ದಾಖಲೆಗಳನ್ನು ಕೇಳಿ ಅವರ ಧರ್ಮವನ್ನು ಗುರುತಿಸುವುದು , ಹಲವು ಬಾರಿ ‘ಜೈಶ್ರೀ ರಾಮ್’ ಎಂದು ಹೇಳಲು ಬಲವಂತಪಡಿಸುವುದು ಅವರ ಅಪರಾಧದ ವಿಧಾನವಾಗಿತ್ತು” ಎಂದು ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.

“ಜೈ ಶ್ರೀ ರಾಮ್ ಎಂದು ಹೇಳದವರನ್ನು ಮತ್ತು ಮುಸ್ಲಿಂ ಎಂದು ಸಾಬೀತಾದವರನ್ನು ಕೊಂದು ಚರಂಡಿಗೆ ಎಸೆಯುತ್ತಿದ್ದರು” ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News