ಕೋವಿಡ್ 19: ದೇಶದಲ್ಲಿ ಒಂದೇ ದಿನ 22 ಸಾವಿರ ಪಾಸಿಟಿವ್, 446 ಮಂದಿ ಬಲಿ

Update: 2020-07-04 03:42 GMT

ಹೊಸದಿಲ್ಲಿ: ದೇಶದಲ್ಲಿ ನೋವಲ್ ಕೊರೋನ ವೈರಸ್ ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಶುಕ್ರವಾರ ಒಂದೇ ದಿನ ಇದುವರೆಗಿನ ಗರಿಷ್ಠ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಅಂತೆಯೇ 446 ಮಂದಿ ಸೋಂಕಿತರು ಬಲಿಯಾಗಿದ್ದು, ಇದು ಕೂಡಾ ಹೊಸ ದಾಖಲೆ.

ಗುರುವಾರ 22 ಸಾವಿರ ಹೊಸ ಪ್ರಕರಣಗಳು ವರದಿಯಾಗಿದ್ದು, ಎರಡೇ ದಿನದಲ್ಲಿ 45,500 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 18,662ಕ್ಕೇರಿದೆ.

ಸೋಂಕಿತರ ಸಂಖ್ಯೆ ಆರು ಲಕ್ಷದ ಗಡಿದಾಟಿದ ಎರಡೇ ದಿನಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6,49,708ಕ್ಕೇರಿದೆ. ಏತನ್ಮಧ್ಯೆ 3.93 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಚೇತರಿಸಿಕೊಂಡವರ ಪ್ರಮಾಣ ಶೇಕಡ 60ಕ್ಕೇರಿದೆ.

ಶುಕ್ರವಾರ ದೇಶದಲ್ಲಿ 23,526 ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ 6,364 ಪ್ರಕರಣಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ತೆಲಂಗಾಣ (1,892) ಮತ್ತು ಕರ್ನಾಟಕ (1,694) ಸೇರಿದಂತೆ ಕನಿಷ್ಠ ಏಳು ರಾಜ್ಯಗಳು ದಿನದ ಗರಿಷ್ಠ ಸಂಖ್ಯೆಯ ದಾಖಲೆ ಸೃಷ್ಟಿಸಿವೆ. ಉತ್ತರ ಪ್ರದೇಶ (972), ಗುಜರಾತ್ (687), ಬಂಗಾಳ (669), ಒಡಿಶಾ (561) ಮತ್ತು ಕೇರಳ (211) ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ.

ಶುಕ್ರವಾರ 4,329 ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾದ ಎರಡನೇ ರಾಜ್ಯವಾಗಿ ತಮಿಳುನಾಡು ಹೊರಹೊಮ್ಮಿದೆ. ದೆಹಲಿಯಲ್ಲಿ 2,520 ಪ್ರಕರಣಗಳು ಸೇರಿದ್ದು, ಒಟ್ಟು ಸೋಂಕಿತರ ಸಂಖ್ಯೆ 94,600ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News