ಪ್ರಬಲ ಭಾರತದ ಪ್ರಧಾನಿ ಏಕಿಷ್ಟು ದುರ್ಬಲ?: ಮೋದಿಯನ್ನು ಕುಟುಕಿದ ಕಾಂಗ್ರೆಸ್

Update: 2020-07-04 04:06 GMT

ಹೊಸದಿಲ್ಲಿ: ಭಾರತೀಯ ಭೂಭಾಗವನ್ನು ಚೀನಾ ಅತಿಕ್ರಮಿಸಿಕೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಪ್ರಧಾನಿ ತಮ್ಮ ಇತ್ತೀಚಿನ ಭಾಷಣಗಳಲ್ಲಿ ಒಮ್ಮೆಯೂ ಚೀನಾದ ಹೆಸರನ್ನು ಏಕೆ ಉಲ್ಲೇಖಿಸಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದೆ.

ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ, ನಮ್ಮ ಪ್ರಧಾನಿಯವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿಂಗ್‍ ಪಿಂಗ್ ಬಗ್ಗೆ ಏಕಿಷ್ಟು ಕರುಣೆ ಎಂದು ಕೆಣಕಿದೆ. ಪ್ರಧಾನಿ ದೇಶದ ಬಗ್ಗೆ ನಿಷ್ಠೆ ಪ್ರದರ್ಶಿಸುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆಗೆ ಚರ್ಚಿಸುವ ವೇಳೆಗಾದರೂ ಚೀನಾವನ್ನು ಅತಿಕ್ರಮಣಕೋರ ದೇಶ ಎಂದು ಹೆಸರಿಸಿದ್ದೀರಾ ಎಂದು ಪ್ರಶ್ನಿಸಿದೆ. ನಮ್ಮ ಭೂಮಿಯನ್ನು ಚೀನಾ ಅತಿಕ್ರಮಿಸಿಕೊಂಡಿದೆ ಎಂದು ಲಡಾಖ್‍ನ ಜನ ಹೇಳುತ್ತಿದ್ದರೆ, ಪ್ರಧಾನಿ ಭಿನ್ನ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಹುಲ್‍ ಗಾಂಧಿ ಟೀಕಿಸಿದ್ದಾರೆ.

ಭಾರತೀಯ ಭೂಭಾಗವನ್ನು ಚೀನಾ ಅತಿಕ್ರಮಿಸಿಕೊಂಡಿದೆ ಎಂದು ಲಡಾಖ್‍ನ ಜನ ಆಪಾದಿಸುತ್ತಿರುವ ಆಡಿಯೊವನ್ನು ರಾಹುಲ್ ಶೇರ್ ಮಾಡಿದ್ದಾರೆ.

ಜೂನ್ 28ರ ಮನ್‍ಕಿ ಬಾತ್‍ ನಲ್ಲಿ, ಜೂನ್ 30ರ ಭಾಷಣದಲ್ಲಿ, ಜುಲೈ 3ರಂದು ಸೈನಿಕರನ್ನುದ್ದೇಶಿಸಿ ಲೆಹ್‍ ನಲ್ಲಿ ಮಾಡಿದ ಭಾಷಣದಲ್ಲಿ ಮೋದಿಯವರು ಚೀನಾದ ಹೆಸರು ಹೇಳಿಲ್ಲ. ಪ್ರಬಲ ಭಾರತದ ಪ್ರಧಾನಿ ಏಕಿಷ್ಟು ದುರ್ಬಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಕೆಣಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News