ಕೇರಳ: ಕೊರೋನ ಕಣ್ಗಾವಲಿಗೆ ಬೈಕ್‍ನಲ್ಲಿ ಬರಲಿದ್ದಾರೆ ಮಹಿಳಾ ಪೊಲೀಸರು

Update: 2020-07-04 04:34 GMT
Photo: hindustantimes.com

ತಿರುವನಂತಪುರಂ: ಕೇರಳದಲ್ಲಿ ಕೋವಿಡ್-19 ಕಣ್ಗಾವಲು ಕರ್ತವ್ಯಕ್ಕೆ ಶೀಘ್ರವೇ ಮಹಿಳಾ ಪೊಲೀಸರು ಬೈಕ್‍ನಲ್ಲಿ ಆಗಮಿಸಲಿದ್ದಾರೆ !

ಕ್ವಾರಂಟೈನ್ ಕೇಂದ್ರಗಳಲ್ಲಿ ತಪಾಸಣೆ, ಲಾಕ್‍ಡೌನ್ ನಿರ್ಬಂಧಗಳ ಜಾತಿ, ಸುರಕ್ಷಿತ ಅಂತರ ನಿಯಮಾವಳಿ ಉಲ್ಲಂಘಿಸುವವರನ್ನು ಶಿಕ್ಷಿಸುವುದು ಮತ್ತಿತರ ಕಾರ್ಯಗಳಿಗೆ ಮಹಿಳಾ ಪೊಲೀಸರು ನಿಯೋಜಿತರಾಗಲಿದ್ದಾರೆ. ಕೇರಳದಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಅರೋಗ್ಯ ಕಾರ್ಯಕರ್ತರು, ಆರೈಕೆದಾರರು, ಸಲಹೆ ನೀಡುವವರು, ಸ್ಥಳೀಯ ಸಂಸ್ಥೆಗಳ ಸದಸ್ಯರು ಹೀಗೆ ಮಹಿಳೆಯರು ಮುಂಚೂಣಿಯಲ್ಲಿದ್ದು, ಇದೀಗ ಮಹಿಳಾ ಪೊಲೀಸರು ಕೂಡಾ ಕೋವಿಡ್ ಕರ್ತವ್ಯಕ್ಕೆ ಧುಮುಕಲಿದ್ದಾರೆ.

ತ್ರಿಶ್ಶೂರ್ ನಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದು ಅತ್ಯಂತ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ ರಾಜ್ಯಾದ್ಯಂತ ಇದನ್ನು ವಿಸ್ತರಿಸಲು ಮುಂದಾಗಿದ್ದಾರೆ.

“ಡೇರ್‍ಡೆವಿಲ್ ಸವಾರರು ಮಹಿಳಾ ಶಕ್ತಿಯನ್ನು ತೋರಿಸಿದ್ದಾರೆ. ಕ್ವಾರಂಟೈನ್‍ನಲ್ಲಿರುವ ಜನರ ಜತೆ ನಿರಂತರ ಸಂಪರ್ಕ ಸಾಧಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಇದೇ ವೇಳೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣವಾಗಿದ್ದಾರೆ. ಕೆಲವೇ ದಿನಗಳಲ್ಲಿ ಹಲವು ಪ್ರಕರಣ ದಾಖಲಿಸಿದ್ದಾರೆ. ಪರಿಸ್ಥಿತಿಯನ್ನು ಕಾಳಜಿ ಮತ್ತು ಅನುಕಂಪದಿಂದ ನಿರ್ವಹಿಸುತ್ತಿದ್ದಾರೆ” ಎಂದು ಡಿಜಿಪಿ ವಿವರಿಸಿದ್ದಾರೆ.

"ಇದಕ್ಕಾಗಿ 40 ಮಂದಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ತರಬೇತುಗೊಳಿಸಲಾಗಿದ್ದು, ತ್ರಿಶ್ಶೂರಿನಲ್ಲಿ 10 ಬುಲೆಟ್‍ಗಳಲ್ಲಿ ತಲಾ ಇಬ್ಬರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರೂ ಅದ್ಭುತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರಗಳಿಗೆ ನಿಯತವಾಗಿ ಭೇಟಿ ನೀಡಿ ಅವರ ದೂರುಗಳನ್ನು ಆಲಿಸಿ ಬಗೆಹರಿಸುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ಬಂದಿದೆ" ಎಂದು ತ್ರಿಶ್ಶೂರ್ ಪೊಲೀಸ್ ಆಯುಕ್ತ ಆರ್.ಆದಿತ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News