ಎರಡು ಬಾರಿ ಕೊರೋನ ವೈರಸ್ ವರದಿ ನೆಗೆಟಿವ್ ಬಂದಿದ್ದ ಕಿರಿಯ ವೈದ್ಯ ಮೃತ್ಯು

Update: 2020-07-04 16:41 GMT

ಹೊಸದಿಲ್ಲಿ: ಕೊರೋನ ವೈರಸ್ ನ ಲಕ್ಷಣಗಳಿದ್ದರೂ ಎರಡು ಬಾರಿ ನೆಗೆಟಿವ್ ವರದಿ ಬಂದಿದ್ದ ದಿಲ್ಲಿಯ ಕಿರಿಯ ವೈದ್ಯರೊಬ್ಬರು ನಿಧನರಾಗಿದ್ದಾರೆ.

“ನನ್ನಲ್ಲಿರುವ ಎಲ್ಲಾ ಲಕ್ಷಣಗಳು ಕೊರೋನದ್ದು, ನಾನು 100 ಶೇ. ಪಾಸಿಟಿವ್ ಆಗಿರಲಿದ್ದೇನೆ” ಎಂದು ಕೊನೆಯುಸಿರೆಳೆಯುವುದಕ್ಕೆ ಸ್ವಲ್ಪ ಮುಂಚಿತವಾಗಿ 27 ವರ್ಷದ ವೈದ್ಯ ಅಭಿಷೇಕ್ ಭಯಾನ ತನ್ನ ಸಹೋದರನಲ್ಲಿ ಹೇಳಿದ್ದರು ಎಂದು ವರದಿಯಾಗಿದೆ.

ದಿಲ್ಲಿಯ ಮೌಲಾನ ಆಝಾದ್ ಇನ್ ಸ್ಟಿಟ್ಯೂಟ್  ಫಾರ್ ಡೆಂಟಲ್ ಸೈನ್ಸಸ್ ನ ವೈದ್ಯರಾಗಿರುವ ಇವರಿಗೆ ಕೊರೋನ ವೈರಸ್ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸಿತ್ತು. ಅವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ವೈದ್ಯರಿಗೆ ತೋರಿಸಿದ್ದರು. ಎಕ್ಸ ರೇ ನಡೆಸಿದಾಗ ಎದೆಯಲ್ಲಿ ಇನ್ ಫೆಕ್ಶನ್ ಆಗಿರುವುದು ಕಂಡುಬಂತು.

“ಇದು ವೈರಲ್ ಜ್ವರ ಎಂದು ನಾವು ಭಾವಿಸಿದ್ದೆವು. ಆದರೆ ಉಸಿರಾಟದ ತೊಂದರೆ ಇರುವ ಕಾರಣ ಆತ ಇದು ಇನ್ ಫೆಕ್ಶನ್ ಅಲ್ಲ ಎಂದು ಹೇಳುತ್ತಿದ್ದ” ಎಂದು ಅಭಿಷೇಕ್ ಸಹೋದರ ಹೇಳುತ್ತಾರೆ.

ಅವರ ಮೊದಲ ಕೊರೋನ ವೈರಸ್ ಪರೀಕ್ಷೆಯನ್ನು ಜೂನ್ ಅಂತ್ಯದಲ್ಲಿ ಹಾಗೂ ಎರಡನೆ ಪರೀಕ್ಷೆಯನ್ನು ಜುಲೈ 1ರಂದು ನಡೆಸಲಾಗಿದ್ದು ಎರಡೂ ನೆಗೆಟಿವ್ ಬಂದಿತ್ತು.

   ಆದರೆ ಗುರುವಾರ ಬೆಳಗ್ಗೆ ಅವರ ಪರಿಸ್ಥಿತಿ ತೀರಾ ಹದಗೆಟ್ಟಿತ್ತು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತನ್ನ ಕೊನೆಯ ಉಸಿರಿನವರೆಗೂ ಅಭಿಷೇಕ್ ಅವರು ತನಗೆ ಕೊರೋನ ಇರುವುದಾಗಿ ಹೇಳಿದ್ದರು. ಬೇರೆ ಯಾವುದೋ ಕಾರಣಗಳಿಂದ ಫಲಿತಾಂಶ ನೆಗೆಟಿವ್ ಬಂದಿರಬಹುದೆಂದು ಆತ ಹೇಳಿದ್ದರು ಎಂಬುದಾಗಿ ಸಹೋದರ ಅಮಾನ್ ಭಯಾನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News