“ಅವರು ಕೇಳಿದ 128 ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ನನ್ನ ಒಂದು ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ'

Update: 2020-07-04 10:15 GMT

ಹೊಸದಿಲ್ಲಿ: ‘ಸಂದೇಸರ ಸಮೂಹಕ್ಕೆ ವಿವಿಧ ಸವಲತ್ತುಗಳನ್ನು ಹಾಗೂ ಗೌರವಗಳನ್ನು ಗುಜರಾತ್ ಸರಕಾರದಲ್ಲಿರುವ ಯಾರು ನೀಡಿದ್ದರು’ ಎಂಬ ತಮ್ಮ ಪ್ರಶ್ನೆಗೆ ತನಿಖಾ ಏಜನ್ಸಿ ಉತ್ತರಿಸಲು ವಿಫಲವಾಗಿದೆ ಎಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಹೇಳಿಕೊಂಡಿದ್ದಾರೆ.

ವಡೋದರಾದಲ್ಲಿರುವ ಸ್ಟರ್ಲಿಂಗ್ ಬಯೋಟೆಕ್ ಫಾರ್ಮಾ ಕಂಪೆನಿಯ ಪ್ರವರ್ತಕರಾದ ಸಂದೇಸರ ಸೋದರರ ಜತೆಗೆ ಪಟೇಲ್ ಅವರಿಗಿದೆಯೆನ್ನಲಾದ ನಂಟಿನ ಕುರಿತಂತೆ ಹಾಗೂ ಅವರ ಜತೆಗೆ ಪಟೇಲ್ ಕುಟುಂಬಿಕರು ಹೊಂದಿದ್ದಾರೆನ್ನಲಾದ ವಹಿವಾಟಿನ ಕುರಿತು ವಿಚಾರಣೆ ನಡೆಯುತ್ತಿದೆ.

ಜಾರಿ ನಿರ್ದೇಶನಾಲಯ ತನಗೆ ಕೇಳಿದ 128 ಪ್ರಶ್ನೆಗಳಿಗೆ ತಾವು ಉತ್ತರಿಸಿರುವುದಾಗಿ ತಿಳಿಸಿರುವ ಪಟೇಲ್,  ಸಂದೇಸರ ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ತಮ್ಮ ಮನೆಗೆ ಮೂರು ಬಾರಿ ಭೇಟಿ ನೀಡಿದ್ದಕ್ಕಾಗಿ ತನಿಖಾ ಏಜನ್ಸಿಗೆ ಧನ್ಯವಾದ ತಿಳಿಸಿದ್ದಾರೆ.

“ಅವರು ಕೇಳಿದ 128 ಪ್ರಶ್ನೆಗಳಿಗೂ ನಾನು ಉತ್ತರ ನೀಡಿದ್ದೇನೆ, ಆದರೆ ನಾನು ಕೇಳಿದ ಒಂದು ಪ್ರಶ್ನೆಗೆ ಅವರು ಉತ್ತರಿಸಲು ವಿಫಲರಾಗಿದ್ದಾರೆ” ಎಂದು ಪಟೇಲ್ ಟ್ವೀಟ್ ಮಾಡಿದ್ದಾರೆ.

ಸಂದೇಸರ ಸೋದರರ ಬ್ಯಾಂಕ್ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಟೇಲ್ ಅವರ ನಿವಾಸದಲ್ಲಿ ಸುಮಾರು ಹತ್ತು ಗಂಟೆಗಳ ಕಾಲ ಮೂರನೇ ಸುತ್ತಿನ ವಿಚಾರಣೆ ನಡೆಸಿದ್ದರು.

“ಇದು ರಾಜಕೀಯ ದ್ವೇಷದ ಕ್ರಮ ಹಾಗೂ ನನಗೆ ಮತ್ತು ನನ್ನ ಕುಟುಂಬಕ್ಕೆ ಕಿರುಕುಳ ನೀಡುವ ಯತ್ನ. ಯಾರ ಒತ್ತಡದ ಮೇರೆಗೆ ಅವರು (ತನಿಖಾಧಿಕಾರಿಗಳು) ಕೆಲಸ ಮಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ” ಎಂದು ವಿಚಾರಣೆ ಮುಗಿದ ನಂತರ ಪಟೇಲ್ ಪ್ರತಿಕ್ರಿಯಿಸಿದ್ದರು.

ಇದಕ್ಕೂ ಮುಂಚೆ ಜೂನ್ 27 ಹಾಗೂ 30ರಂದು ಸುಮಾರು 17 ಗಂಟೆಗಳ ಕಾಲ ವಿಚಾರಣೆ ನಡೆದಿತ್ತು. ಪ್ರಸ್ತುತ ಕೋವಿಡ್-19 ಸಮಸ್ಯೆಯ ಹಿನ್ನೆಲೆಯಲ್ಲಿ ನಿರ್ದೇಶನಾಲಯದ ಕಚೇರಿಗೆ ಬರಲು ಪಟೇಲ್ ನಿರಾಕರಿಸಿದ ನಂತರ ಅವರ ನಿವಾಸದಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News