“ಕ್ಲಿನಿಕಲ್ ಟ್ರಯಲ್ ಗೂ ಮುನ್ನ ಲಸಿಕೆ ಬಿಡುಗಡೆ ದಿನಾಂಕ ನಿರ್ಧರಿಸುವುದು ಜಗತ್ತಿನಲ್ಲಿ ಎಲ್ಲೂ ನಡೆದಿಲ್ಲ”

Update: 2020-07-04 13:17 GMT

ಹೊಸದಿಲ್ಲಿ: ದೇಶೀಯವಾಗಿ ತಯಾರಿಸಲಾದ ಭಾರತದ ಮೊದಲ ಕೋವಿಡ್-19 ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸುವ ಕ್ಲಿನಿಕಲ್ ಟ್ರಯಲ್‍ ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅನುಮತಿ ನೀಡಿ ಆಗಸ್ಟ್ 15ರೊಳಗೆ ಈ ಲಸಿಕೆ ಸಾರ್ವಜನಿಕರಿಗಾಗಿ ಲಭ್ಯವಾಗುವಂತೆ ಮಾಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿರುವುದು ಹಲವು ತಜ್ಞರಿಗೆ ಅಸಮಾಧಾನ ತಂದಿದೆ.

“ಒಂದು ಲಸಿಕೆಯ ಕ್ಲಿನಿಕಲ್ ಟ್ರಯಲ್ ಕೈಗೊಳ್ಳುವ ಮುನ್ನವೇ ಅದರ ಬಿಡುಗಡೆಯ ದಿನಾಂಕವನ್ನು ನಿರ್ಧರಿಸುವುದು ಜಗತ್ತಿನಲ್ಲಿ ಎಲ್ಲಿಯೂ ನಡೆಯುವುದಿಲ್ಲ” ಎಂದು  ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ ಸಂಪಾದಕ ಅಮರ್ ಜೇಸಾನಿ ಹೇಳಿದ್ದಾರೆ.

ಐಸಿಎಂಆರ್ ಮಹಾನಿರ್ದೇಶಕ ಬಲರಾಂ ಭಾರ್ಗವ ಅವರು ಎಲ್ಲಾ ಕೆಲಸಗಳನ್ನು ತ್ವರಿತವಾಗಿ ನಡೆಸುವಂತೆ ಕ್ಲಿನಿಕಲ್ ಟ್ರಯಲ್‍ ಗಳಲ್ಲಿ ಭಾಗವಹಿಸುವ 12 ಸಂಸ್ಥೆಗಳಿಗೆ ಪತ್ರ ಬರೆದಿರುವುದೂ ಸಾಕಷ್ಟು ಚರ್ಚೆಗೀಡಾಗಿದೆ.

ತಾವು ಪತ್ರವನ್ನು ನೋಡದೇ ಇದ್ದರೂ ನೀಡಲಾದ ಸಮಯಾವಕಾಶ ಬಹಳ ಕಡಿಮೆ. ಒಂದು ತಿಂಗಳೊಳಗೆ ಲಸಿಕೆ ಬಿಡುಗಡೆಗೊಳಿಸಬೇಕೆಂಬುದು ಹಾಗೂ ನೀಡಲಾದ ಅವಧಿ ಬಹಳ ಕಡಿಮೆ, ಪ್ರಕ್ರಿಯೆಯನ್ನು ತ್ವರಿತಗೊಳಿಸಿದರೂ ಕನಿಷ್ಠ ಒಂದು ವರ್ಷವಾದರೂ ಬೇಕು ಎಂದು ಐಸಿಎಂಆರ್‍ನ ಬಯೋಎಥಿಕ್ಸ್ ಸೆಲ್‍ನ  ನೈತಿಕ ಸಲಹಾ ಸಮಿತಿಯ ಅಧ್ಯಕ್ಷೆ ವಸಂತ ಮುತ್ತುಸ್ವಾಮಿ ತಿಳಿಸಿದ್ದಾರೆ.

ಅಚ್ಚರಿಯೆಂದರೆ ಕ್ಲಿನಿಕಲ್ ಟ್ರಯಲ್‍ ನಲ್ಲಿ ಭಾಗಿಯಾಗುವ 12 ಸಂಸ್ಥೆಗಳಿಗೆ ಐಸಿಎಂಆರ್ ಎಥಿಕ್ಸ್ ಸಮಿತಿ ಇನ್ನಷ್ಟೇ ಅತ್ಯಗತ್ಯವಾಗಿರುವ ಹಸಿರು ನಿಶಾನೆ ನೀಡಬೇಕಿದೆ.

ಹೈದರಾಬಾದ್ ಮೂಲದ ಖಾಸಗಿ ಕಂಪೆನಿ ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಎಂಬ ಈ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಕ್ಕೆ ಜೂನ್ 29ರಂದು ಅನುಮತಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News