ಹೋಂ ಐಸೊಲೇಶನ್ ಗೆ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ಸರಕಾರ

Update: 2020-07-04 16:13 GMT

ಹೊಸದಿಲ್ಲಿ,ಜು.4: ಯಾವುದೇ ರೋಗಲಕ್ಷಣಗಳಿಲ್ಲದ ಭಾರೀ ಸಂಖ್ಯೆಯ ಜನರು ಕೋವಿಡ್-19ಗೆ ಪಾಸಿಟಿವ್ ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಇಂತಹವರನ್ನು ಸೌಮ್ಯ ಅಥವಾ ಕಡಿಮೆ ಕೊರೋನ ವೈರಸ್ ಸೋಂಕಿನ ಪ್ರಕರಣಗಳ ಪಟ್ಟಿಯಲ್ಲಿ ಸೇರಿಸಲು ಹೋಂ ಐಸೊಲೇಷನ್ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

 ಪರಿಷ್ಕೃತ ಮಾರ್ಗಸೂಚಿಗಳಂತೆ ಎಚ್‌ಐವಿ, ಅಂಗಾಂಗ ಕಸಿಗೊಳಗಾದವರು ಮತ್ತು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರು ಸೇರಿದಂತೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವವರು ಹೋಂ ಐಸೊಲೇಷನ್‌ಗೆ ಅರ್ಹರಾಗುವುದಿಲ್ಲ. 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಮತ್ತು ಅಧಿಕ ರಕ್ತದೊತ್ತಡ,ಮಧುಮೇಹ,ಹೃದಯರೋಗ,ದೀರ್ಘಕಾಲೀನ ಶ್ವಾಸಕೋಶ/ಯಕೃತ್ತು /ಮೂತ್ರಪಿಂಡ ರೋಗ ಮತ್ತು ಪಾರ್ಶ್ವವಾಯುವಿನಂತಹ ಮಸ್ತಿಷ್ಕ ರೋಗ ಇತ್ಯಾದಿ ಕಾಯಿಲೆ ಪೀಡಿತರನ್ನು ಚಿಕಿತ್ಸೆ ನೀಡುತ್ತಿರುವ ವೈದ್ಯಾಧಿಕಾರಿಯಿಂದ ಸೂಕ್ತ ಪರಿಶೀಲನೆಯ ಬಳಿಕವೇ ಹೋಂ ಐಸೊಲೇಷನ್‌ನಲ್ಲಿ ಇರಲು ಅವಕಾಶ ನೀಡಲಾಗುವುದು.

ಹೋಂ ಐಸೊಲೇಷನ್‌ನಲ್ಲಿರುವ ರೋಗಿಗಳನ್ನು ಲಕ್ಷಣಗಳು ಕಾಣಿಸಿಕೊಂಡ 10 ದಿನಗಳ ಬಳಿಕ, ಹಿಂದಿನ ಮೂರು ದಿನಗಳಲ್ಲಿ ಜ್ವರವಿದ್ದಿರದಿದ್ದರೆ ಬಿಡುಗಡೆಗೊಳಿಸಲಾಗುವುದು. ನಂತರ ರೋಗಿಗಳು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಮತ್ತು ಮುಂದಿನ ಏಳು ದಿನಗಳ ಕಾಲ ತಮ್ಮ ಆರೋಗ್ಯದ ಮೇಲೆ ಸ್ವಯಂ ನಿಗಾಯಿರಿಸಬೇಕು. ಹೋಂ ಐಸೊಲೇಷನ್ ಅವಧಿಯ ಬಳಿಕ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ.

ಯಾವುದೇ ಲಕ್ಷಣಗಳಿಲ್ಲದ ರೋಗಿಗಳು ತಮ್ಮ ಮನೆಯಲ್ಲಿ ಇತರ ಕುಟುಂಬ ಸದಸ್ಯರೊಂದಿಗೆ ಸಂಪರ್ಕವನ್ನು ನಿವಾರಿಸಲು ಸಾಧ್ಯವಾಗುವಂತೆ ತಮಗಾಗಿ ಪ್ರತ್ಯೇಕ ಕೋಣೆಯನ್ನು ಹೊಂದಿದ್ದರೆ ಹೋಂ ಐಸೊಲೇಷನ್ ಆಯ್ಕೆ ಮಾಡಿಕೊಳ್ಳಬಹುದು.

24x 7 ಆಧಾರದಲ್ಲಿ ರೋಗಿಯ ಆರೈಕೆಯನ್ನು ನೋಡಿಕೊಳ್ಳುವ ಮೇಲ್ವಿಚಾರಕನಿದ್ದು, ಆತ ಹೋಂ ಐಸೊಲೇಷನ್‌ನ ಇಡೀ ಅವಧಿಯಲ್ಲಿ ಆಸ್ಪತ್ರೆಯೊಂದಿಗೆ ಸಂಪರ್ಕವನ್ನು ಹೊಂದಿರಬೇಕು. ಮೇಲ್ವಿಚಾರಕ ಮತ್ತು ರೋಗಿಯ ನಿಕಟ ಸಂಪರ್ಕದಲ್ಲಿರುವ ಎಲ್ಲರೂ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಾಧಿಕಾರಿಯ ಶಿಫಾರಸಿನಂತೆ ಹೈಡ್ರಾಕ್ಸಿಕ್ಲೋರೊಕ್ವಿನ್ ಅನ್ನು ಸೇವಿಸಬೇಕು ಎಂದು ಪರಿಷ್ಕೃತ ಮಾರ್ಗಸೂಚಿಯು ತಿಳಿಸಿದೆ.

ಹೋಂ ಐಸೊಲೇಷನ್‌ನಲ್ಲಿರುವ ರೋಗಿಗಳು ಆರೋಗ್ಯ ಸೇತು ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡಿರಬೇಕು ಮತ್ತು ಅದು ಸದಾ ಕಾಲ ಸಕ್ರಿಯವಾಗಿರಬೇಕು ಎಂದೂ ಅದು ಸೂಚಿಸಿದೆ.

 ಉಸಿರಾಟದಲ್ಲಿ ತೊಂದರೆ, ರಕ್ತದಲ್ಲಿಯ ಆಮ್ಲಜನಕದ ಶುದ್ಧತೆಯಲ್ಲಿ ಕುಸಿತ, ಎದೆಯಲ್ಲಿ ನಿರಂತರ ನೋವು/ಒತ್ತಡ, ಮಾನಸಿಕ ಗೊಂದಲ, ತೊದಲು ಮಾತು/ಸೆಳೆತಗಳು, ನಿಶ್ಶಕ್ತಿ ಅಥವಾ ಕೈಕಾಲು ಮತ್ತು ಮುಖದಲ್ಲಿ ಮರಗಟ್ಟುವಿಕೆ ಹಾಗೂ ತುಟಿ/ಮುಖದ ಚರ್ಮ ನೀಲಿ ಬಣ್ಣಕ್ಕೆ ತಿರುಗುವುದು ಇತ್ಯಾದಿ ಗಂಭೀರ ಲಕ್ಷಣಗಳು ಅಥವಾ ತೊಂದರೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವನ್ನು ಪಡೆದುಕೊಳ್ಳಬೇಕು ಇತ್ಯಾದಿಗಳು ಪರಿಷ್ಕೃತ ಮಾರ್ಗಸೂಚಿಯಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News