ಎಂಟು ಪೊಲೀಸರ ಹಂತಕ ವಿಕಾಸ ದುಬೆಯ ಮನೆ ನೆಲಸಮ

Update: 2020-07-04 16:18 GMT

ಲಕ್ನೋ,ಜು.4: ಕಾನ್ಪುರದ ಚೌಬೆಪುರ ಪೊಲೀಸ್ ಠಾಣಾ ವ್ಯಾಪ್ತಿಯ ತನ್ನ ಸ್ವಗ್ರಾಮ ಬಿಕ್ರುವಿನಲ್ಲಿ ಶುಕ್ರವಾರ ಎಂಟು ಪೊಲೀಸರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ರೌಡಿಶೀಟರ್ ವಿಕಾಸ ದುಬೆಯ ಭದ್ರಕೋಟೆಯಂತಿದ್ದ ಮನೆಯನ್ನು ಅಧಿಕಾರಿಗಳು ಶನಿವಾರ ನೆಲಸಮಗೊಳಿಸಿದ್ದಾರೆ.

 ನೆಲಸಮ ಕಾರ್ಯಾಚರಣೆಯನ್ನು ಆರಂಭಿಸುವ ಮುನ್ನ ಪೊಲೀಸರು ಮನೆಯಲ್ಲಿದ್ದ ದುಬೆಯ ತಂದೆ-ತಾಯಿ ಮತ್ತು ಸೇವಕರನ್ನು ಅಲ್ಲಿಂದ ತೆರವುಗೊಳಿಸಿದ್ದರು ಮತ್ತು ಮನೆಯ ಸುತ್ತ 50 ಮೀ.ಪ್ರದೇಶದಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದರು. ಮನೆಯ ಆವರಣದಲ್ಲಿದ್ದ ವಾಹನಗಳನ್ನು ನಿಲ್ಲಿಸುವ ಶೆಡ್‌ಗಳನ್ನೂ ಧ್ವಂಸಗೊಳಿಸಲಾಗಿದೆ.

ಮುಳ್ಳುತಂತಿಗಳನ್ನು ಮತ್ತು 50 ಸಿಸಿಟಿವಿಗಳನ್ನು ಅಳವಡಿಸಿದ್ದ,30 ರಿಂದ 40 ಅಡಿ ಎತ್ತರದ ದಪ್ಪ ಆವರಣ ಗೋಡೆಗಳನ್ನು ಹೊಂದಿದ್ದ ಮನೆಯ ನೆಲಸಮ ಸಂದರ್ಭ ಪ್ರದೇಶದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು.

ದುಬೆ ಕಾನ್ಪುರ ಮತ್ತು ಇತರ ಸ್ಥಳಗಳಲ್ಲಿ ಕೋಟ್ಯಂತರ ರೂ.ವೌಲ್ಯದ ಜಮೀನನ್ನು ಅತಿಕ್ರಮಿಸಿಕೊಂಡಿದ್ದಾನೆ ಮತ್ತು ಹಲವಾರು ಐಷಾರಾಮಿ ಕಾರುಗಳು,ದುಬಾರಿ ಬೆಲೆಯ ಪೀಠೋಪಕರಣಗಳು ಮತ್ತು ಇಲೆಕ್ಟ್ರಾನಿಕ್ ಸಾಧನಗಳನ್ನು ಹೊಂದಿದ್ದಾನೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಶುಕ್ರವಾರ ಗುಂಡಿನ ಕಾಳಗದ ಬಳಿಕ ದುಬೆಯ ಮನೆಯನ್ನು ಸೀಲ್ ಮಾಡಿದ್ದ ಪೊಲೀಸರು ಶೋಧ ಕಾರ್ಯಾಚರಣೆ ಯನ್ನು ನಡೆಸಿದ್ದು, ಈ ಸಂದರ್ಭ ಆವರಣದಲ್ಲಿಯ ಹಳೆಯ ಮನೆಯೊಂದರಲ್ಲಿ ಬಂಕರ್‌ವೊಂದು ಪತ್ತೆಯಾಗಿತ್ತು.

 ಆವರಣದಲ್ಲಿಯ ಹೊಸಮನೆಯನ್ನು ಏಳೆಂಟು ವರ್ಷಗಳ ಹಿಂದಷ್ಟೇ ನಿರ್ಮಿಸಲಾಗಿತ್ತು ಮತ್ತು ಅಲ್ಲಿದ್ದ ಪೂರ್ವಜರ ಮನೆಯಲ್ಲಿ ಸೇವಕರು ವಾಸವಿದ್ದರು ಎಂದು ಗ್ರಾಮಸ್ಥರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News