ಆ.15ರ ಕೋವಿಡ್-19 ಲಸಿಕೆ ಗಡುವು ಸಮರ್ಥಿಸಿಕೊಂಡ ಐಸಿಎಂಆರ್ ಹೇಳಿದ್ದು ಹೀಗೆ…

Update: 2020-07-04 17:52 GMT

ಹೊಸದಿಲ್ಲಿ,ಜು.4: ವೈಜ್ಞಾನಿಕ ಸಮುದಾಯದ ಟೀಕೆಗಳ ನಡುವೆಯೇ ಆ.15ರಂದು ಭಾರತದ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ಅನ್ನು ಬಿಡುಗಡೆಗೊಳಿಸುವ ತನ್ನ ಗುರಿಯನ್ನು ಶನಿವಾರ ಸಮರ್ಥಿಸಿಕೊಂಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು,ಈ ಪ್ರಕ್ರಿಯೆಯು ಲಸಿಕೆ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಜಾಗತಿಕವಾಗಿ ಒಪ್ಪಿಕೊಳ್ಳಲಾಗಿರುವ ನಿಯಮಗಳಿಗೆ ಅನುಗುಣವಾಗಿದೆ ಎಂದು ಹೇಳಿದೆ.

ಲಸಿಕೆಯನ್ನು ಸಾರ್ವಜನಿಕವಾಗಿ ಚಿಕಿತ್ಸೆಗೆ ಸಿದ್ಧಪಡಿಸುವಲ್ಲಿ ‘ಹೆಚ್ಚುಕಡಿಮೆ ಅಸಾಧ್ಯವಾಗಿರುವ ಗಡುವನ್ನು ’ವೈಜ್ಞಾನಿಕ ಸಮುದಾಯವು ಪ್ರಶ್ನಿಸಿದ ನಂತರ ನೀಡಿರುವ ಹೇಳಿಕೆಯೊಂದರಲ್ಲಿ ಐಸಿಎಂಆರ್ ಈ ವಿಷಯವನ್ನು ಸ್ಪಷ್ಟಪಡಿಸಿದೆ.

ಆ.15ರಂದು ಲಸಿಕೆಯನ್ನು ಬಿಡುಗಡೆಗೊಳಿಸುವ ಐಸಿಎಂಆರ್‌ನ ದೃಢನಿರ್ಧಾರವು ಗಡುವಿನಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದೊಂದಿಗೆ ರಾಜಿ ಮಾಡಿಕೊಳ್ಳಬಹುದು ಎಂಬ ಭೀತಿಯನ್ನು ಸೃಷ್ಟಿಸಿದೆ.

ಹೈದರಾಬಾದ್‌ನ ಔಷಧಿ ತಯಾರಿಕೆ ಕಂಪನಿ ಭಾರತ ಬಯೊಟೆಕ್ ಐಸಿಎಂಆರ್‌ನ ಲ್ಯಾಬ್ ಆಗಿರುವ ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಯ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಿರುವ ಕೋವ್ಯಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸಲು ಆಯ್ಕೆಯಾಗಿರುವ 12 ಆಸ್ಪತ್ರೆಗಳಿಗೆ ಐಸಿಎಂಆರ್‌ನ ಮಹಾನಿರ್ದೇಶಕ ಬಲರಾಮ ಭಾರ್ಗವ ಅವರು ಬರೆದಿರುವ ಪತ್ರದಲ್ಲಿ ಆ.15ರ ಗಡುವನ್ನು ಉಲ್ಲೇಖಿಸಲಾಗಿತ್ತು.

ಸಾರ್ವಜನಿಕ ಕ್ಷೇತ್ರದಲ್ಲಿ ಟೀಕಾಕಾರರು ಎತ್ತಿರುವ ವಿಷಯಗಳನ್ನು ತಾನು ಸ್ವಾಗತಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಐಸಿಎಂಆರ್,ದೇಶದ ಅತ್ಯುತ್ತಮ ವೈದ್ಯಕೀಯ ವೃತ್ತಿಪರರು ಮತ್ತು ಸಂಶೋಧನಾ ವಿಜ್ಞಾನಿಗಳ ವೃತ್ತಿಪರತೆಯನ್ನು ಶಂಕಿಸಕೂಡದು. ರೋಗಿಗಳ ಸುರಕ್ಷತೆಗೆ ತಾನು ಬದ್ಧವಾಗಿದ್ದೇನೆ ಮತ್ತು ಭಾರತೀಯರ ಹಿತಾಸಕ್ತಿಗಳ ರಕ್ಷಣೆ ತನ್ನ ಅತ್ಯುನ್ನತ ಆದ್ಯತೆಯಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News