ಕೋವಿಡ್-19 ವಿರುದ್ಧ ಹೋರಾಡಲು ಡಿಆರ್‌ಡಿಒದಿಂದ 70 ‘ಮೇಕ್ ಇನ್ ಇಂಡಿಯಾ ’ಉತ್ಪನ್ನಗಳ ತಯಾರಿಕೆ

Update: 2020-07-05 17:44 GMT

ಹೊಸದಿಲ್ಲಿ,ಜು.5: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಕೋವಿಡ್-19ರ ವಿರುದ್ಧ ಹೋರಾಡಲು 70 ‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಈವರೆಗೆ ತಯಾರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಸತೀಶ ರೆಡ್ಡಿ ಅವರು ರವಿವಾರ ಇಲ್ಲಿ ತಿಳಿಸಿದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರವಿವಾರ ಡಿಆರ್‌ಡಿಒ ದಿಲ್ಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಕೇವಲ 11 ದಿನಗಳಲ್ಲಿ ತಲೆಯೆತ್ತಿರುವ ಈ ತಾತ್ಕಾಲಿಕ ಆಸ್ಪತ್ರೆಯು 250 ಐಸಿಯು ಹಾಸಿಗೆಗಳು ಸೇರಿದಂತೆ ಒಟ್ಟು 1,000 ಹಾಸಿಗೆಗಳನ್ನು ಹೊಂದಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದರು.

24X7 ಆಸ್ಪತ್ರೆಯು ರೋಗಿಗಳಿಗೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತದೆ ಮತ್ತು ಸೇನಾ ಸಿಬ್ಬಂದಿಗಳು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದ ಜಾಗವನ್ನು ಮಟ್ಟಸಗೊಳಿಸಿ ಸ್ವಚ್ಛಗೊಳಿಸಿದ ಬಳಿಕ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದು ರೆಡ್ಡಿ ಹೇಳಿದರು.

ಅಗತ್ಯವಿದ್ದರೆ ದಿನಕ್ಕೆ ಸುಮಾರು 25,000 ವೆಂಟಿಲೇಟರ್‌ಗಳನ್ನು ತಯಾರಿಸಲು ನಾವು ಸಮರ್ಥರಿದ್ದೇವೆ ಮತ್ತು ಅವುಗಳನ್ನು ರಫ್ತು ಮಾಡಲೂ ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News