​ಅತಿಥಿ ಉಪನ್ಯಾಸಕರ ಆತ್ಮಹತ್ಯೆಗೆ ಸರಕಾರವೇ ಹೊಣೆ: ಡಾ.ನರಹರಿ

Update: 2020-07-06 12:11 GMT

ಉಡುಪಿ, ಜು.6: ರಾಜ್ಯದಲ್ಲಿ ಈವರೆಗೆ ಆಳ್ವಿಕೆ ನಡೆಸಿದ ಎಲ್ಲಾ ಸರಕಾರಗಳು ಅತಿಥಿ ಉಪನ್ಯಾಸಕರ ಕಷ್ಟಗಳಿಗೆ ಸ್ಪಂದಿಸದೇ ಅವರನ್ನು ತ್ರಿಶಂಕು ಸ್ಥಿತಿಯಲ್ಲಿಟ್ಟಿವೆ. ಹೀಗಾಗಿ ಪ್ರಸ್ತುತ ಕೊರೋನದಿಂದ ಉಂಟಾದ ತೀವ್ರ ಆರ್ಥಿಕ ಸಂಕಷ್ಟದಿಂದ ರಾಜ್ಯದಲ್ಲಿ ಈವರೆಗೆ ಎಂಟು ಮಂದಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಈ ಸರಕಾರ ನೇರ ಹೊಣೆಯಾಗಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎಂ.ನರಹರಿ ಆರೋಪಿಸಿದ್ದಾರೆ.

ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ, ಶಾಖಾ ಮಠ ಉಡುಪಿ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಹೋಟೆಲ್ ಸ್ವದೇಶ್ ಹೆರಿಟೇಜ್ ಸಭಾಂಗಣದಲ್ಲಿ ಸೋಮವಾರ ಉಡುಪಿ ಜಿಲ್ಲೆಯ ಆಯ್ದ ಅತಿಥಿ ಉಪನ್ಯಾಸಕರಿಗೆ ಕೊಡಮಾಡಿದ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಈ ರಾಜ್ಯದಲ್ಲಿ ಆಡಳಿತದ ನಡೆಸಿದ ಕಾಂಗ್ರೆಸ್, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹಾಗೂ ಪ್ರಸ್ತುತ ಆಡಳಿತರೂಢ ಬಿಜೆಪಿ ಸರಕಾರಗಳಾವುದೂ ಅತಿಥಿ ಉಪನ್ಯಾಸಕರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಇದರಿಂದ ಈಗ ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಈವರೆಗೆ 8 ಮಂದಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇವುಗಳಿಗೆ ಈ ಸರಕಾರ ನೇರ ಹೊಣೆ ಎಂದು ಡಾ.ನರಹರಿ ದೂರಿದರು.

ಚುನಾವಣೆಗಳ ಸಂದರ್ಭದಲ್ಲಿ ನಮ್ಮನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲೂ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವುದಾಗಿ ಹೇಳಿಕೊಳ್ಳುತ್ತವೆ. ರಾಜ್ಯದಲ್ಲಿ ಸದ್ಯ 14,579 ಅತಿಥಿ ಉಪನ್ಯಾಸಕರಿದ್ದು, ನಮ್ಮಿಂದಾಗಿ ಸರಕಾರಕ್ಕೆ ಪ್ರತಿ ವರ್ಷ ಕೋಟ್ಯಾಂತರ ರೂ. ಉಳಿತಾಯವಾಗುತ್ತದೆ. ಆದರೆ ನಮ್ಮ ಈ ಸೇವೆಯನ್ನು ಅರ್ಥ ಮಾಡಿಕೊಳ್ಳದೇ ಎಲ್ಲಾ ಪಕ್ಷಗಳ ಸರಕಾರಗಳು ನಮ್ಮನ್ನು ರಸ್ತೆಗೆ ತಳ್ಳಿವೆ ಎಂದು ಡಾ.ನರಹರಿ ತಿಳಿಸಿದರು.

ಸರಕಾರಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಉಪನ್ಯಾಸಕರು ಇಂದು ಆತ್ಮಹತ್ಯೆಗೆ ಶರಣಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ನಮಗೆ ನಿಮ್ಮ ಕನಿಕರ ಬೇಕಿಲ್ಲ. ಸೂಕ್ತ ವೇತನ ಹಾಗೂ ಉದ್ಯೋಗ ಭದ್ರತೆ ಕೊಡಿ ಸಾಕು ಎಂದು ಹೇಳಿದರು.

ಕೇರಳ, ತಮಿಳುನಾಡು, ಹೊಸದಿಲ್ಲಿ, ಪಶ್ಚಿಮಬಂಗಾಳ, ಅಸ್ಸಾಂ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಕೇರಳದಲ್ಲಿ 32 ಸಾವಿರ ರೂ., ಆಂಧ್ರಪ್ರದೇಶ 33 ಸಾವಿರ, ಅಸ್ಸಾಂ 57 ಸಾವಿರ ರೂ. ವೇತನವನ್ನು ನೀಡುತ್ತಿವೆ. ಆದರೆ ಕರ್ನಾಟಕದಲ್ಲಿ ಅದರ ಅರ್ಧದಷ್ಟು ವೇತನವೂ ಸಿಗುತ್ತಿಲ್ಲ. ಇದು ರಾಜ್ಯ ಸರಕಾರ ಶಿಕ್ಷಕರನ್ನು ನಡೆಸಿಕೊಳ್ಳುವ ರೀತಿಗೆ ಕೈಗನ್ನಡಿ ಎಂದರು.

ಮಂಗಳವಾರ ಪ್ರತಿಭಟನೆ: ಆಟೋರಿಕ್ಷಾ ಚಾಲಕರು, ಕಾರ್ಮಿಕರ ಸಹಿತ ಕೊರೋನ ಸಂದರ್ಭದಲ್ಲಿ ಎಲ್ಲರನ್ನು ಗಣನೆಗೆ ತೆಗೆದುಕೊಂಡಿರುವ ಸರಕಾರ, ಅತಿಥಿ ಶಿಕ್ಷಕರನ್ನು ಮಾತ್ರ ಕಾಲಕಸದಂತೆ ನೋಡಿದೆ. ನಮ್ಮನ್ನು ಶಿಕ್ಷಕರಾಗಿಯೇ ಮುಂದುವರಿಸಿ ಎಂದು ನಾವು ಕೇಳುತ್ತಿಲ್ಲ. ನಮ್ಮ ಶೈಕ್ಷಣಿಕ ಅರ್ಹತೆಗೆ ಅನುಗುಣ ವಾಗಿ ಎಸ್‌ಡಿಎ, ಪದವಿಪೂರ್ವ, ಡಿಗ್ರಿ ಕಾಲೇಜುಗಳಿಗೆ ಖಾಯಂ ಮಾಡಿಕೊಳ್ಳಿ ಎನ್ನುವ ಬೇಡಿಕೆ ಇಟ್ಟರೂ ಪ್ರಯೋಜನವಾಗಿಲ್ಲ ಎಂದು ದೂರಿದ ಅವರು, ಇದರ ವಿರುದ್ಧ ಪ್ರತಿ ಮಂಗಳವಾರ ಒಂದು ಗಂಟೆ ಕಾಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರಕಾರವನ್ನು ಎಚ್ಚೆರಿಸುವ ಕೆಲಸ ಮಾಡಬೇಕಿದೆ ಎಂದರು.

ಕಿಟ್ ವಿತರಿಸಿ ಮಾತನಾಡಿದ ನಾಡಿನ ಖ್ಯಾತ ಮನೋವೈದ್ಯ ಡಾ.ಪಿ.ವಿ. ಭಂಡಾರಿ, ನಮ್ಮ ಇಂದಿನ ಸರಕಾರಕ್ಕೆ ಮೊಸಳೆ ಕಣ್ಣೀರು ಜಾಸ್ತಿ . ಕೋವಿಡ್-19 ರಿಂದಾಗಿ ಕಡುಬಡವರು, ಮದ್ಯಮ ವರ್ಗ, ಕೆಳ ಮದ್ಯಮ ವರ್ಗ ಹೆಚ್ಚು ಸಂಕಷ್ಟದಲ್ಲಿವೆ. ಉದ್ಯೋಗ ಭದ್ರತೆ, ಸೂಕ್ತ ವೇತನವಿಲ್ಲದ ಅತಿಥಿ ಉಪನ್ಯಾಸಕರ ಕಷ್ಟ ಸರಕಾರಕ್ಕೆ ಅರ್ಥವಾಗುತ್ತಿಲ್ಲ. ನಿಜವಾಗಿ ಸರಕಾರ ನೀಡಬೇಕಿದ್ದ ಈ ಕಿಟ್‌ನ್ನು ನಾಗರಿಕ ಸಂಸ್ಥೆಯೊಂದು ನೀಡುವ ಮೂಲಕ ಸರಕಾರಕ್ಕೆ ಒಂದು ರೀತಿಯ ಪ್ರತಿಭಟನೆಯ ಎಚ್ಚರಿೆ ನೀಡಿದೆ ಎಂದು ಅಭಿಪ್ರಾಯಪಟ್ಟರು.

ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೋನಾಲ್ಡ್ ಪ್ರವೀಣ್ ಕುಮಾರ್, ಸಮನ್ವಯ ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ಮಂಜಪ್ಪ ದ್ಯಾಗೋಣಿ, ಜಿಲ್ಲಾಧ್ಯಕ್ಷೆ ಶಾಯಿದಾ ಜಹಾನ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅಧ್ಯಕ್ಷ ಎಂ.ನಾಗೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮನ್ವಯ ಸಮಿತಿ ಕಾನೂನು ಸಲಹೆಗಾರ ರಫೀಕ್ ಖಾನ್, ಕಾರ್ಯದರ್ಶಿ ಸಂತೆಷ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News