ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್- ಚೀನಾ ವಿದೇಶಾಂಗ ಸಚಿವ ಮಾತುಕತೆ

Update: 2020-07-06 17:38 GMT

ಹೊಸದಿಲ್ಲಿ: ವಾಸ್ತವ ನಿಯಂತ್ರಣ ರೇಖೆಯ ಬಳಿಯಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲು ಭಾರತ ಹಾಗೂ ಚೀನಾ ಸೋಮವಾರ ಒಪ್ಪಿಕೊಂಡಿವೆ. ಗಡಿಯಲ್ಲಿ ಸಂಪೂರ್ಣ ಶಾಂತಿ-ಸೌಹಾರ್ದತೆಯನ್ನು ಪುನಃಸ್ಥಾಪಿಸಲು ಎರಡೂ ದೇಶಗಳು ಸಮ್ಮತಿ ಸೂಚಿಸಿವೆ.

ಎನ್ಎಸ್ಎ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ದೂರವಾಣಿ ಸಂಭಾಷಣೆ ನಡೆಸಿದರು. ಎರಡೂ ಕಡೆಯವರು ಭಾರತ- ಚೀನಾ ಗಡಿಯ ಪಶ್ಚಿಮ ಭಾಗದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು ಎಂದು ಸರ್ಕಾರ ಹೇಳಿಕೆ ನೀಡಿದೆ.

ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಬೇಕು ಎನ್ನುವುದು ಎರಡೂ ಕಡೆಯ ನಾಯಕರ ಒಮ್ಮತದ ಅಭಿಪ್ರಾಯವಾಗಿದ್ದು, ಅವರ ಮಾರ್ಗದರ್ಶನ ಪಡೆಯಲು ವಿಶೇಷ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ. ಭಿನ್ನಾಭಿಪ್ರಾಯಗಳು ವ್ಯಾಜ್ಯವಾಗಿ ಬೆಳೆಯಲು ಅವಕಾಶ ನೀಡಬಾರದು ಎಂದು ಉಭಯ ಮುಖಂಡರು ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಭಾರತ- ಚೀನಾ ಗಡಿಯಲ್ಲಿ ಶಾಂತಿ- ಸೌಹಾರ್ದತೆ ಸ್ಥಾಪಿಸಲು ವಾಸ್ತವ ನಿಯಂತ್ರಣ ರೇಖೆ ಬಳಿಯಿಂದ ಸೇನೆಯನ್ನು ಸಂಪೂರ್ಣವಾಗಿ ಹಾಗೂ ಶೀಘ್ರವಾಗಿ ವಾಪಾಸು ಕರೆಸಿಕೊಳ್ಳುವುದು ಅಗತ್ಯ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ಚೀನಾದ ವಿದೇಶಾಂಗ ಸಚಿವ ಹಾಗೂ ಸ್ಟೇಟ್ ಕೌನ್ಸಿಲರ್ ವಾಂಗ್ ಯೀ ಹೇಳಿಕೆ ನೀಡಿ, ‘‘ಬೀಜಿಂಗ್ ತನ್ನ ಭೂಪ್ರದೇಶದ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲಿದೆ; ಅಂತೆಯೇ ಗಡಿ ಹಾಗೂ ಶಾಂತಿಯನ್ನೂ ಕಾಪಾಡಿಕೊಳ್ಳಲಿದೆ’’ ಎಂದು ಸ್ಪಷ್ಟಪಡಿಸಿದ್ದಾರೆ. ಉಭಯ ಕಡೆಯವರು ಪರಸ್ಪರರಿಗೆ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗದಂತೆ ಪ್ರಮುಖ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ವಾಸ್ತವ ನಿಯಂತ್ರಣ ರೇಖೆಯನ್ನು ಉಭಯ ದೇಶಗಳು ಕಟ್ಟುನಿಟ್ಟಾಗಿ ಗೌರವಿಸಬೇಕು ಹಾಗೂ ಯಥಾಸ್ಥಿತಿಯನ್ನು ಬದಲಿಸಲು ಯಾವುದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಬಾರದು. ಭವಿಷ್ಯದಲ್ಲಿ ಶಾಂತಿ ಹಾಗೂ ಸೌಹಾರ್ದಕ್ಕೆ ಧಕ್ಕೆಯಾಗುವ ಯಾವುದೇ ಘಟನೆಗಳಾಗದಂತೆ ತಡೆಯಲು ಜತೆಯಾಗಿ ಕಾರ್ಯನಿರ್ವಹಿಸಬೇಕು ಎಂಬ ನಿರ್ಧಾರಕ್ಕೆ ಉಭಯ ಮುಖಂಡರು ಬಂದಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News