ಉಗ್ರರ ಜೊತೆ ಸಿಕ್ಕಿಬಿದ್ದ ಮಾಜಿ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

Update: 2020-07-06 17:43 GMT

ಹೊಸದಿಲ್ಲಿ: ಉಗ್ರಗಾಮಿಗಳನ್ನು ಕರೆದೊಯ್ಯುವ ವೇಳೆ ಸಿಕ್ಕಿಹಾಕಿಕೊಂಡ ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿ ಡಿವೈಎಸ್ಪಿ ದವೀಂದರ್ ಸಿಂಗ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆರೋಪಪಟ್ಟಿ ಸಲ್ಲಿಸಿದೆ.

ಜಮ್ಮು ನ್ಯಾಯಾಲಯದಲ್ಲಿ ಸಿಂಗ್ ಹಾಗೂ ಸಹಚರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದನ್ನು ಎನ್ಐಎ ಅಧಿಕಾರಿಗಳು ಸಿಎನ್ಎನ್ ನ್ಯೂಸ್ 18ಗೆ ದೃಢಪಡಿಸಿದ್ದಾರೆ. ಹಿಜ್ಬುಲ್ ಉಗ್ರರಾದ ನವೀದ್ ಮುಷ್ತಾಕ್ ಅಲಿಯಾಸ್ ಬಾಬು, ಆತನ ಸಹೋದರ ಇರ್ಫಾನ್ ಮುಷ್ತಾಕ್, ಕ್ರಾಸ್ ಎಲ್ಓಸಿ ಟ್ರೇಡ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ತನ್ವೀರ್ ಅಹ್ಮದ್ ಹಾಗೂ ವಕೀಲ ಇರ್ಫಾನ್ ಶಫಿ ಮೀರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

2020ರ ಜನವರಿ 11ರಂದು ಉಗ್ರರಾದ ನವೀದ್ ಮುಷ್ತಾಕ್  ಮತ್ತು ರಫಿ ಅಹ್ಮದ್ ರಾಥೆರ್ ನನ್ನು ಜಮ್ಮುವಿಗೆ ಕರೆದೊಯ್ಯುತ್ತಿದ್ದಾಗ ದವೀಂದರ್ ನನ್ನು ದಕ್ಷಿಣ ಕಾಶ್ಮೀರದ ಕುಲುಗಾಂವ್ ಚೆಕ್ ಪೋಸ್ಟ್ ನಲ್ಲಿ ಬಂಧಿಸಲಾಗಿತ್ತು.

ಸಾವಿರಾರು ಪುಟಗಳ ಆರೋಪಪಟ್ಟಿಯಲ್ಲಿ, ಪಾಕಿಸ್ತಾನ ಹೈಕಮಿಷನ್ ನ ಸಹಾಯಕ ಶಫಕತ್ ಪಾತ್ರದ ಬಗ್ಗೆಯೂ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈಗಾಗಲೇ ಅಮಾನತುಗೊಂಡಿರುವ ಸಿಂಗ್, ಪಾಕಿಸ್ತಾನ ಹೈಕಮಿಷನ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಕಾಶ್ಮೀರ ಕಣಿವೆಯಿಂದ ಜಮ್ಮುವಿಗೆ ಉಗ್ರರು ನುಸುಳಲು ನೆರವಾಗುತ್ತಿದ್ದ ಎನ್ನಲಾಗಿದೆ. ಕಣಿವೆಯಿಂದ ಹೊರಗೆ ವಸತಿ ಸೌಲಭ್ಯ ಪಡೆಯುವಲ್ಲಿ ಕೂಡಾ ನೆರವಾಗಿದ್ದ ಆರೋಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News