ಗಂಗೊಳ್ಳಿಯಲ್ಲಿ ಭೀಕರ ಅಗ್ನಿ ದುರಂತ: ಮೂರು ಅಂಗಡಿಗಳು ಬೆಂಕಿಗಾಹುತಿ, ಮನೆಗೆ ಭಾಗಶಃ ಹಾನಿ

Update: 2020-07-07 12:39 GMT

ಗಂಗೊಳ್ಳಿ, ಜು.7: ಮೇಲ್ ಗಂಗೊಳ್ಳಿಯ ವಾಟರ್ ಟ್ಯಾಂಕರ್ ಬಳಿ ಇಂದು ನಸುಕಿನ ವೇಳೆ 3:15ರ ಸುಮಾರಿಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂರು ಅಂಗಡಿಗಳು ಸಂಪೂರ್ಣ ಹಾಗೂ ಒಂದು ಮನೆ ಭಾಗಶಃ ಸುಟ್ಟು ಹೋಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಸ್ಥಳೀಯ ಸಹೋದರರಾದ ದಿನೇಶ್ ನಾಯಕ್ ಹಾಗೂ ಪಧ್ಮನಾಭ ನಾಯಕ್ ಎಂಬವರ ಮನೆಗೆ ತಾಗಿಕೊಂಡೇ ಅವರದ್ದೆ ತರಕಾರಿ, ದಿನಸಿ ಹಾಗೂ ಐಸ್‌ಕ್ರೀಂ, ಹಾಲಿನ ಒಟ್ಟು ಮೂರು ಅಂಗಡಿಗಳಿದ್ದು, ಅಕಸ್ಮಿಕವಾಗಿ ಉಂಟಾದ ಅನಾಹುತದಿಂದ ಮೂರು ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗೆ ಅಹುತಿಯಾಗಿವೆ. ಮನೆ ಕೂಡ ಭಾಗಶಃ ಬೆಂಕಿಯಿಂದ ಸುಟ್ಟು ಹೋಗಿದೆ.

ಮಾಹಿತಿ ತಿಳಿದ ತಕ್ಷಣ ಅಂದರೆ ನಸುಕಿನ ವೇಳೆ 3.45ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿ ಶಾಮಕದಳದವರು, ಗಂಗೊಳ್ಳಿ ಪೊಲೀಸರು, ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರು. ಬೆಂಕಿ ಮನೆಗೆ ವಿಸ್ತರಿಸುವ ಮೂನ್ಸೂಚನೆಯ ಹಿನ್ನೆಲೆಯಲ್ಲಿ ಕೂಡಲೇ ಮನೆಯಲ್ಲಿದ್ದ ಎಲ್ಲರನ್ನು ಬೇರೆ ಮನೆಗೆ ಸ್ಥಳಾಂತರಿಸಲಾಯಿತು.

ಗ್ಯಾಸ್ ಸಿಲಿಂಡರ್ ಸ್ಪೋಟ: ಅಂಗಡಿಯಿಂದ ಆರಂಭಗೊಂಡ ಬೆಂಕಿ ಕೆನ್ನಾಲಿಗೆ ಅದಕ್ಕೆ ತಾಗಿಕೊಂಡಿರುವ ಮನೆಗೂ ವಿಸ್ತರಿಸಿದ್ದು, ಇದರಿಂದ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರೊಂದು ಸ್ಪೋಟಗೊಂಡಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.

ಈ ಅವಘಡದಿಂದ ಐದು ರೆಫ್ರಿಜರೇಟರ್, 50ಸಾವಿರ ರೂ. ಮೌಲ್ಯದ ಐಸ್‌ಕ್ರೀಂ, 10ಸಾವಿರ ರೂ. ಮೌಲ್ಯದ ಹಾಲು, ಮೊಸರು, ಅಂಗಡಿಯಲ್ಲಿದ್ದ 88ಸಾವಿರ ರೂ. ನಗದು, 20ಸಾವಿರ ರೂ. ಮೌಲ್ಯದ ಹಣ್ಣು ತರಕಾರಿ, ಬೇಕರಿ ವಸ್ತುಗಳು, ಫ್ಯಾನ್, ಐದು ಕಪಾಟು, ಮನೆಯಲ್ಲಿದ್ದ ಪುಸ್ತಕಗಳು ಸಂಪೂರ್ಣ ಸುಟ್ಟು ಹೋಗಿವೆ. ಅದೇ ರೀತಿ ಕಟ್ಟಡಗಳಿಗೂ ಹಾನಿಯಾಗಿವೆ. ಹೀಗೆ ಒಟ್ಟು 2.50ಲಕ್ಷ ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಕುಂದಾಪುರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ.ಎನ್.ಮೊಗೇರ ನೇತೃತ್ವದ ಆರು ಮಂದಿ ಸಿಬ್ಬಂದಿ ಒಂದು ವಾಹನ ಮೂಲಕ ನಿರಂತರ ಮೂರುವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಬೆಳಗ್ಗೆ 7:30ಕ್ಕೆ ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು. ಇದಕ್ಕೆ ಸ್ಥಳೀಯರು ಕೂಡ ಸಾಥ್ ನೀಡಿದ್ದರು. ಈ ಅನಾಹುತಕ್ಕೆ ವಿದ್ಯುತ್ ಶಾರ್ಟ್ ಸಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News