ಮಲ್ಪೆ: ಕ್ಷುಲ್ಲಕ ಕಾರಣಕ್ಕಾಗಿ ಯುವಕನ ಕೊಲೆ

Update: 2020-07-07 16:11 GMT
ಯೋಗೀಶ್

ಮಲ್ಪೆ, ಜು.7: ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಜು.6ರಂದು ರಾತ್ರಿ 11.30ರ ಸುಮಾರಿಗೆ ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರ ಮೂರನೆ ಕ್ರಾಸ್ ಎಂಬಲ್ಲಿ ನಡೆದಿದೆ.

ಲಕ್ಷ್ಮೀನಗರ ಮೂರನೆ ಕ್ರಾಸ್ ನಿವಾಸಿ ನಾರಾಯಣ ಪೂಜಾರಿ ಎಂಬವರ ಮಗ ಯೋಗೀಶ್ ಪೂಜಾರಿ(26) ಕೊಲೆಯಾದ ಯುವಕ. ರೌಡಿ ಶೀಟರ್ ಸುಜಿತ್ ಪಿಂಟೋ, ರೋಹಿತ್ ಪಿಂಟೋ, ಪ್ರದೀಪ್ ಯಾನೆ ಅಣ್ಣು, ವಿನಯ, ಅನುಪ್ ಸೇರಿದಂತೆ ಒಟ್ಟು ಆರು ಮಂದಿ ಕೊಲೆ ಆರೋಪಿಗಳೆಂದು ದೂರಲಾಗಿದೆ.

ಪೂರ್ವ ಧ್ವೇಷಕ್ಕೆ ಸಂಬಂಧಿಸಿ ಇವರ ಮಧ್ಯೆ ಪೋನಿನ ಮೂಲಕ ಮಾತುಕತೆ ನಡೆದಿತ್ತೆನ್ನಲಾಗಿದೆ. ಇದೇ ವಿಚಾರದಲ್ಲಿ ಸಿಟ್ಟಿಗೆದ್ದ ಆರೋಪಿಗಳು ಕುಡಿದ ಮತ್ತಿನಲ್ಲಿ ಯೋಗೀಶ್ ಪೂಜಾರಿಯ ಮನೆಯ ಮುಂದೆ ಕಾರಿನಲ್ಲಿ ಬಂದರು. ಅಲ್ಲಿ ಇವರ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಆರೋಪಿಗಳು ತಮ್ಮಲ್ಲಿದ್ದ ಚೂರಿಯಿಂದ ಯೋಗೀಶ್‌ನ ಹೊಟ್ಟೆ ಮತ್ತು ಬೆನ್ನಿನ ಭಾಗಗಳಿಗೆ ತಿವಿದು ಕೊಲೆ ಮಾಡಿ, ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.

ಯೋಗೀಶ್ ಮಲ್ಪೆಯ ಬಂದರಿನಲ್ಲಿ ಬೋಟಿನಿಂದ ಮೀನು ಖಾಲಿ ಮಾಡುವ ಕನ್ನಿಪಾರ್ಟಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲ ದಿನಗಳ ಹಿಂದೆ ಆ ಕೆಲಸ ಬಿಟ್ಟಿದ್ದನು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್, ವೃತ್ತ ನಿರೀಕ್ಷಕ ಮಂಜುನಾಥ್, ಮಲ್ಪೆ ಎಸ್ಸೈ ತಿಮ್ಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲ್ಯಾಣಪುರದ ಸುಜಿತ್ ಪಿಂಟೋ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆದ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈತ 2018ರ ಜು.29ರಂದು ನಡೆದ ಮಣಿಪಾಲದ ಇಸ್ಪೀಟ್ ಕ್ಲಬ್ ನ ಮಾಲಕ ಗುರು ಪ್ರಸಾದ್ ಭಟ್ ಕೊಲೆ ಮತ್ತು ಹಿರಿಯಡ್ಕ ಕೋತ್ನಕಟ್ಟೆ ಎಂಬಲ್ಲಿ 2017ರ ಡಿ.19ರಂದು ನಡೆದ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ: 143, 147, 148, 302 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಮೂರು ತಂಡ ರಚನೆ: ಎಸ್ಪಿ

ಪರಾರಿಯಾಗಿರುವ ಕೊಲೆ ಆರೋಪಿಗಳ ಪತ್ತೆಗಾಗಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಮಲ್ಪೆ, ಉಡುಪಿ ನಗರ ಮತ್ತು ನಗರ ಕ್ರೈಮ್ ಎಸ್ಸೈಗಳ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ತಿಳಿಸಿದ್ದಾರೆ.
ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆರೋಪಿಗಳ ಬಂಧನದ ನಂತರವೇ ತಿಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ತಂಡ ಕಾರ್ಯಪ್ರವೃತ್ತವಾಗಿದ್ದು, ಆರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News