ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಅಕ್ರಮ: ವಿಪಕ್ಷ ಕಾಂಗ್ರೆಸ್ ಆರೋಪ

Update: 2020-07-07 07:36 GMT

ಮಂಗಳೂರು, ಜು.7: ಕೊರೋನ ಸೋಂಕಿನ ಆತಂಕದ ನಡುವೆಯೇ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಕೆಲ ಕಾಮಗಾರಿ ಹಾಗೂ ಟೆಂಡರ್‌ಗಳಲ್ಲಿ ಅಕ್ರಮ ನಡೆದಿದೆ ಎಂದು ಮನಪಾ ವಿಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ.

ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್‌ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿಯ ಕೆಲವು ಕಾಮಗರಿಗಳಲ್ಲಿನ ಅವ್ಯವಹಾರ, ಅಕ್ರಮಗಳ ಕುರಿತು ತಮ್ಮಲ್ಲಿ ದಾಖಲೆಗಳಿರುವುದಾಗಿ ಹೇಳಿದರು.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯನ್ನು ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಯೋಜನೆ ರೂಪಿಸಲಾಗಿತ್ತು. ಆದರೆ ಕಾಮಗಾರಿಗಳು ಆ ಪ್ರಕಾರ ನಡೆಯುತ್ತಿಲ್ಲ. ಯೋಜನೆಗಾಗಿ ರೂಪಿಸಲಾದ ಡಿಪಿಆರ್‌ಗೆ ವ್ಯತಿರಿಕ್ತವಾಗಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಆರ್‌ಟಿಒನಿಂದ ಮಿನಿ ವಿಧಾನಸೌಧದವರೆಗಿನ ಸ್ಮಾರ್ಟ್ ರಸ್ತೆ ಟೆಂಡರ್ 7.5 ಕೋಟಿ ರೂ.ಗೆ ಕರೆಯಲಾಗಿದ್ದು, ಅನ್ನು ಏಕಾಏಕಿ ರದ್ದುಪಡಿಸಲಾಯಿತು. ಏನಾದರೂ ಲೋಪವಿದ್ದಲ್ಲಿ ರದ್ದುಪಡಿಸಲಾದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಬದಲು ಅದೇ ಗುತ್ತಿಗೆದಾರನಿಂದ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಸ್ಥರಿಗೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ 6.5 ಕೋಟಿ ರೂ. ದರದ ಟೆಂಡರ್ ನೀಡಲಾಗಿದೆ. ಇದೆಲ್ಲಾ ಯಾಕಾಗಿ ಎಂದು ಅರ್ಥವಾಗುತ್ತಿಲ್ಲ. ಸೆಂಟ್ರಲ್ ಮಾರುಕಟ್ಟೆ ಬಂದ್ ಆಗಿರುವುದರಿಂದ ವ್ಯಾಪಾರಸ್ಥರು ಕಳೆದ ಸುಮಾರು ನಾಲ್ಕು ತಿಂಗಳಿನಿಂದ ಬೀದಿ ಪಾಲಾಗಿದ್ದಾರೆ. ಈ ನಡುವೆ ನೆಹರೂ ಮೈದಾನದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿದ್ದು, ಇದರ ವಿರುದ್ಧ ಫುಟ್‌ಬಾಲ್ ಅಸೋಸಿಯೇಶನ್‌ನವರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಕಾಮಗಾರಿಗೆ ತಡೆ ನೀಡಲಾಗಿದೆ. ಈ ರೀತಿ ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವ ಕಾರ್ಯ ಪ್ರಸಕ್ತ ಮನಪಾ ಆಡಳಿತ ಹಾಗೂ ಶಾಸಕರು ಹಾಗೂ ಸಂಸದರಿಂದ ಆಗುತ್ತಿದೆ ಎಂದು ಅವರು ಆರೋಪಿಸಿದರು.

ಈ ಹಿಂದೆ ಮಿನಿ ವಿಧಾನ ಸೌಧದ ಎದುರಿನ ಸ್ಮಾರ್ಟ್ ರೋಡ್‌ನಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸಿದ್ದ ಸಂಸದರೂ ಈಗ ವೌನವಾಗಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯ ಜನಪ್ರತಿನಿಧಿಗಳಿಗೆ ಜನರಿಗೆ ಯೋಜನೆ ಕೊಡುವ ಉದ್ದೇಶ ಇಲ್ಲ. ಸದ್ಯ ಯಾರೂ ಕೇಳುವವರೂ ಇಲ್ಲದ ಕಾರಣ ಬೇಕಾಬಿಟ್ಟಿಯಾಗಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಅಬ್ದುಲ್ ರವೂಫ್ ಆರೋಪಿಸಿದರು.

ಕದ್ರಿ ರಸ್ತೆಗೆ ಕರೆಯಲಾದ ಟೆಂಡರ್‌ನಲ್ಲಿ ಕೆಲವು ವಸ್ತುಗಳಿಗೆ ಸಿವಿಲ್ ದರ ನಿಗದಿ ಮಾಡುವಲ್ಲಿ ಅಕ್ರಮ ನಡೆದಿದೆ. 100 ರೂ.ಗಳ ವಸ್ತುವಿಗೆ 500 ರೂ. ದರದಲ್ಲಿ ಟೆಂಡರ್ ಕರೆದು ಅವ್ಯವಹಾರ ಮಾಡಲಾಗಿದೆ. ಆಪ್ತ ಗುತ್ತಿಗೆದಾರರ ಹೆಸರನ್ನೇ ಟೆಂಡರ್‌ನಲ್ಲಿ ನಮೂದಿಸುವ ಮೂಲಕ ಟೆಂಡರ್ ನಿಯಮವನ್ನೂ ಉಲ್ಲಂಘಿಸಲಾಗಿದೆ. ಮಂಗಳಾ ಕ್ರೀಡಾಂಗಣದ ಒಳಾಂಗಣ ಸ್ಟೇಡಿಯಂಗೆ 35 ಕೋಟಿ ರೂ. ಟೆಂಡರ್ ಆಗಿ ತಾಂತ್ರಿಕ ಬಿಡ್ ತೆರೆಯಲಾಗಿತ್ತು. ಇದೀಗ ಹಣಕಾಸಿನ ಬಿಡ್ ತೆರೆಯದೆ ರದ್ದುಪಡಿಸಲು ಮುಂದಾಗಿದ್ದಾರೆ. ಕಾರ್‌ಸ್ಟ್ರೀಟ್‌ನ ರಸ್ತೆ ಸೇರಿದಂತೆ ಕೆಲವು ಕಡೆ ಕಾಂಕ್ರೀಟ್ ಆದ ರಸ್ತೆಗಳನ್ನು ಅಗೆದು ಒಳಚರಂಡಿ ಮಾಡುವ ಕೆಲಸ ಆಗುತ್ತಿದೆ. ಪ್ರತಿಪಕ್ಷವಾಗಿ ಆಡಳಿತ ಪಕ್ಷದ ನ್ಯೂನ್ಯತೆಗಳನ್ನು ಜನತೆಗೆ ತಿಳಿಸುವುದು ನಮ್ಮ ಕರ್ತವ್ಯವಾಗಿದ್ದು, ಅದನ್ನು ಮಾಡುತಿ್ತದ್ದೇವೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಲ್ಯಾನ್ಸಿ ಲಾಟ್ ಪಿಂಟೋ, ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್, ಕೇಶವ ಮರೋಳಿ, ಜೆಸಿಂತಾ ಅಲ್ಪ್ರೆಡ್, ನವೀನ್ ಡಿಸೋಜಾ, ಭಾಸ್ಕರ ಕೆ., ಝೀನತ್ ಬಂದರ್, ಅನಿಲ್ ಕುಮಾರ್, ಸಂಶುದ್ದೀನ್ ಕುದ್ರೋಳಿ, ಅಶ್ರಫ್ ಬಜಾಲ್ ಉಪಸ್ಥಿತರಿದ್ದರು.

ವೆನ್‌ಲಾಕ್‌ನಲ್ಲಿ ಸೂಪರ್ ಸ್ಪೆಷಾಲಿಟಿ 37 ಹಾಸಿಗೆಗಳ ಕಾಮಗಾರಿಗೆ ಅನಂತ ಕೃಷ್ಣ ಶೆಟ್ಟಿ ಎಂಬವರಿಗೆ ಟೆಂಡರ್ ಆಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಆದೇಶ ನೀಡಿದ್ದು, ಗುತ್ತಿಗೆದಾರರು ಬ್ಯಾಂಕ್ ಗ್ಯಾರಂಟಿ ಹಾಗೂ ಭದ್ರತಾ ಠೇವಣಿಯನ್ನೂ ಪಾವತಿಸಿದ್ದರು. 2020ರ ಮಾರ್ಚ್ 13ರಂದು ತಾನು ಕಾಮಗಾರಿ ಆರಂಭಿಸುವುದಾಗಿ ಆದೇಶವನ್ನೂ ಸ್ಮಾರ್ಟ್‌ಸಿಟಿಯಿಂದ ಕೋರಿದ್ದರು. ಆದರೆ ಏಕಾಏಕಿಯಾಗಿ ಮೌಖಿಕವಾಗಿ ಅವರಿಗೆ ನೀಡಲಾಗಿದ್ದ ಆದೇಶ ರದ್ದುಪಡಿಸಿ  2,35,61,251 ರೂ.ಗಳ ಕಾಮಗಾರಿಯನ್ನು ಬಿಜೆಪಿಯ ಜನಪ್ರತಿನಿಧಿಗಳ ಆಪ್ತರಿಂದ ಮಾಡಿಸಿದ್ದಾರೆ. ಕಾಮಗಾರಿಗೆ ಸಂಬಂಧಿಸಿ ಅದಾಗಲೇ ಬ್ಯಾಂಕ್ ಮೂಲಕ ಗ್ಯಾರಂಟಿ ಹಾಗೂ ಸೆಕ್ಯೂರಿಟಿ ಹಣ ಪಾವತಿಸಿದ್ದ ಗುತ್ತಿಗೆದಾರರು ಸ್ಮಾರ್ಟ್ ಸಿಟಿಗೆ ಲೀಗಲ್ ನೋಟೀಸು ಜಾರಿಗೊಳಿಸಿದ್ದಾರೆ. ಇದು ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಡಿ ಆಗುತ್ತಿರುವ ಅಕ್ರಮಗಳಿಗೆ ಜ್ವಲಂತ ಉದಾಹರಣೆ ಎಂದು ವಿಪಕ್ಷ ನಾಯಕ ಅಬ್ದುಲ್ ರವೂಫ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News