ನಿತ್ಯದ ಪಾಸ್ ತಾತ್ಕಾಲಿಕ ರದ್ದು: ಅಡಕತ್ತರಿಯಲ್ಲಿ ಕಾಸರಗೋಡು ಗಡಿನಾಡು ಕನ್ನಡಿಗರು

Update: 2020-07-07 08:15 GMT

ಮಂಗಳೂರು, ಜು.7: ಕೊರೋನ ಸೋಂಕು ಆರಂಭಗೊಂಡಾಗಿನಿಂದ ಕಾಸರಗೋಡು ಗಡಿನಾಡ ಕನ್ನಡಿಗರ ಸ್ಥಿತಿಯೂ ಅಯೋಮಯವಾಗಿದೆ. ಜೀವನೋಪಾಯಕ್ಕಾಗಿ ಉಭಯ ರಾಜ್ಯಗಳನ್ನು, ಉಭಯ ಜಿಲ್ಲೆಗಳನ್ನು ಅವಲಂಬಿಸಿರುವ ಕಾಸರಗೋಡಿನ ಕನ್ನಡಿಗರು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಸುಮಾರು ಎರಡೂವರೆ ತಿಂಗಳ ಲಾಕ್‌ಡೌನ್ ಬಳಿಕ ದ.ಕ. ಹಾಗೂ ಕಾಸರಗೋಡು ಜಿಲ್ಲಾಡಳಿತಗಳ ಜತೆ ಹೋರಾಟ ನಡೆಸಿ ನಿತ್ಯದ ಪಾಸ್ ಪಡೆದು ತಮ್ಮ ಕೆಲಸ ಕಾರ್ಯಗಳಿಗೆ ಗಡಿಗಳಲ್ಲಿ ಸಂಚರಿಸುತ್ತಿದ್ದ ಗಡಿನಾಡ ಕನ್ನಡಿಗರಿಗೆ ಇದೀಗ ಕೇರಳ ಸರಕಾರ ನಿತ್ಯದ ತಾತ್ಕಾಲಿಕ ಪಾಸ್ ನಿರ್ಬಂಧಿಸಿ ಸದ್ಯ 28 ದಿನಗಳ ಪಾಸ್ ವ್ಯವಸ್ಥೆ ಜಾರಿಗೊಳಿಸಿದೆ. ಸರಕಾರದ ಈ ನಿರ್ಧಾರದಿಂದಾಗಿ ಕಾಸರಗೋಡು ನಿವಾಸಿಗಳು ಬೆಳಗ್ಗೆ ಪಾಸ್ ಜತೆಗೆ ತಲಪಾಡಿ ಗಡಿಗೆ ಬಂದಾಗ ಕೇರಳ ಪೊಲೀಸರ ಎಚ್ಚರಿಕೆಯ ನುಡಿಗಳು. ಇದರಿಂದಾಗಿ ತಲಪಾಡಿ ಗಡಿಯಲ್ಲಿ ಜನಸಾಮಾನ್ಯರು ಅಸಹಾಯಕರಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೇರಳ ಸರಕಾರದ ಹೊಸ ತೀರ್ಮಾನ ತಿಳಿಯದೆ ಬಂದವರು ಹಲವರಾದರೆ, ಪಾಸ್ ವ್ಯವಸ್ಥೆಯ ಬಗ್ಗೆ ತಿಳಿಯಲು ಬಂದ ಕೆಲವರು ಗಡಿಯಲ್ಲಿ ಕಾಯುವ ಪರಿಸ್ಥಿತಿ ಎದುರಾಗಿದೆ.

ಕೇರಳ ಸರಕಾರದ ಹೊಸ ನಿಯಮದ ಪ್ರಕಾರ ದ.ಕ. ಜಿಲ್ಲೆಗೆ ಉದ್ಯೋಗಕ್ಕೆ ತೆರಳುವವರು ಅಲ್ಲೇ ವಾಸ್ತವ್ಯ ಹೂಡಬೇಕು. ಕಾಸರಗೋಡಿನಿಂದ ಮಂಗಳೂರು, ಮಂಗಳೂರಿನಿಂದ ಕಾಸರಗೋಡಿಗೆ ನಿತ್ಯದ ಪಾಸ್‌ನಲ್ಲಿ ಬರುವವರು 28 ದಿನಗಳ ಕಾಲ ಉದ್ಯೋಗದ ಸ್ಥಳದಲ್ಲೇ ತಂಗಬೇಕು. ಇದು ವೈದ್ಯರ ಸಹಿತ ಇತರ ಆರೋಗ್ಯ ಕಾಯಕರ್ತರಿಗೂ ಅನ್ವಯ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News