ಕೊರೋನ ರೋಗ ಲಕ್ಷಣಗಳಿದ್ದವರಿಗೆ ಉಚಿತ ಪರೀಕ್ಷೆ, ಚಿಕಿತ್ಸೆ: ಉಡುಪಿ ಡಿಸಿ ಜಗದೀಶ್

Update: 2020-07-07 13:07 GMT

‌ಉಡುಪಿ, ಜು.7: ಪ್ರಸ್ತುತ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿರುವುದರಿಂದ ಹಲವು ಮಂದಿಗೆ ಶೀತ, ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.  ಹಾಗಾಗಿ ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಈ ರೀತಿ ಲಕ್ಷಣಗಳಿರುವವರ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಅಂತವರನ್ನು ಫಿವರ್ ಕ್ಲಿನಿಕ್‌ಗೆ ಕರೆಸಿ ಅಥವಾ ಅವರ ಮನೆಗೆ ಹೋಗಿ ಉಚಿತವಾಗಿ ಸ್ವಾಬ್ ಸಂಗ್ರಹ ಮಾಡಲಾಗುವುದು ಮತ್ತು ಪಾಸಿಟಿವ್ ಬಂದರೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ರೋಗದ ಲಕ್ಷ್ಮಣಗಳು ಕಂಡುಬಂದಾಗ ಮನೆಯಲ್ಲಿ ಕೂತು ಮಾತ್ರೆ ಸೇವಿಸುವುದು ಅಥವಾ ಸ್ವತಃ ತಾವೇ ಚಿಕಿತ್ಸೆ ಮಾಡಿಕೊಳ್ಳುವ ಕೆಲಸವನ್ನು ಯಾರು ಕೂಡ ಮಾಡಬಾರದು. ಯಾವುದೇ ಸಣ್ಣ ಲಕ್ಷಣಗಳಿದ್ದರೂ ತಕ್ಷಣವೇ ಫಿವರ್ ಕ್ಲಿನಿಕ್ ಸಂಪರ್ಕಿಸಬೇಕು. ಅಲ್ಲಿ ಕೋವಿಡ್ ಪರೀಕ್ಷೆ ಮಾಡಿ, ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುವುದು. ಇಲ್ಲದಿದ್ದರೆ ಔಷಧಿಯನ್ನು ನೀಡಿ ಮನೆಗೆ ಕಳುಹಿಸಲಾಗುವುದು ಎಂದರು.

ರೋಗದ ಲಕ್ಷಣಗಳಿದ್ದರೂ ಮನೆಯಲ್ಲಿಯೇ ಕೂತು, ಸ್ವತಃ ತಾವೇ ಚಿಕಿತ್ಸೆ ಮಾಡಿಕೊಳ್ಳುವ ಹಾಗೂ ಕೊನೆಯ ಕ್ಷಣದಲ್ಲಿ ಆಸ್ಪತ್ರೆ ದಾಖಲಾಗುವುದ ರೊಂದಿಗೆ ನಿರ್ಲಕ್ಷ್ಯ ತೋರುವುದರಿಂದ ಇಂದು ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವ ಮೂಲಕ ಪ್ರತಿಯೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತದೆ. ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬಂದರೆ ಜೀವ ಉಳಿಸಲು ಕಷ್ಟ ಆಗುತ್ತದೆ ಎಂದು ಅವರು ತಿಳಿಸಿದರು.

ನಮ್ಮ ಹೋರಾಟ ಪ್ರತಿಯೊಬ್ಬರ ಜೀವ ಉಳಿಸುವುದಾಗಿದೆ. ಇಂತಹ ಯಾವುದೇ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಸ್ಥಳೀಯ ಗ್ರಾಪಂಗಳಿಗೆ ತಿಳಿಸುವ ಕೆಲಸ ಮಾಡಬೇಕು. ಈವರೆಗೆ ನಮ್ಮಲ್ಲಿ ಚಿಕಿತ್ಸೆ ಪಡೆದವರೆಲ್ಲ ಗುಣಮುಖರಾಗಿದ್ದಾರೆ. ಅವರ ಜೀವ ಉಳಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಕೊರೋನ ಯೋಧರಿಗೆ ಸನ್ಮಾನ ಮಾಡುವ ಸಮಯ ಇದಲ್ಲ. ಸುರಕ್ಷಿತ ಅಂತರ ಇಲ್ಲದೆ ಮಾಡುವ ಕಾರ್ಯಕ್ರಮದಿಂದ ಕೊರೋನ ಮತ್ತಷ್ಟು ಹರಡಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಸನ್ಮಾನ ಕಾರ್ಯಕ್ರಮವನ್ನು ಸಂಘ ಸಂಸ್ಥೆಗಳು ನಿಲ್ಲಿಸಬೇಕು. ಮುಂದೆ ಕೊರೋನ ಹೋರಾಟ ಮುಗಿದ ನಂತರ ಎಲ್ಲರಿಗೂ ಸನ್ಮಾನ ಮಾಡಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News