ಮಂಗಳೂರು ವಿವಿ ಕ್ಯಾಂಪಸ್ ನ ಕಾಲೇಜು ಮುಚ್ಚುವ ನಿರ್ಧಾರಕ್ಕೆ ಎಸ್ಕೆಸ್ಸೆಸ್ಸೆಫ್ ವಿರೋಧ

Update: 2020-07-07 11:28 GMT

ಮಂಗಳೂರು,ಜು.7: ಮಂಗಳೂರು ವಿಶ್ವ ವಿದ್ಯಾನಿಲಯವು ಕೋಣಾಜೆ ಕ್ಯಾಂಪಸ್ ನಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ ಪ್ರಥಮ ದರ್ಜೆ ಕಾಲೇಜನ್ನು ಸರಕಾರದ ಅನುಮೋದನೆ ಸಿಕ್ಕಿಲ್ಲ ಹಾಗೂ ಆರ್ಥಿಕವಾಗಿ ನಷ್ಟದಲ್ಲಿದೆ ಎಂಬ ಕಾರಣವನ್ನಿಟ್ಟು ಬಂದ್ ಮಾಡಲು ಹೊರಟಿರುವುದು ವಿಷಾದನೀಯ. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆಗಿನ ಚೆಲ್ಲಾಟವಾಗಿವೆ. ಇದರ ಬಗ್ಗೆ ಸರಕಾರವು ಗಂಭೀರವಾಗಿ ಪರಿಗಣಿಸಿ ಕೂಡಲೇ ಅನುಮತಿ ನೀಡಬೇಕು ಅಥವಾ ಸರಕಾರವೇ ನಡೆಸಬೇಕು ಎಂದು ಎಸ್ಕೆಸ್ಸೆಸ್ಸೆಫ್ ಟ್ರೆಂಡ್ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಸರಕಾರವು ಇದನ್ನು ಪರಿಗಣಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಟ್ರೆಂಡ್ ರಾಜ್ಯ ತರಬೇತುದಾರ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.

ಈ ಬಗ್ಗೆ ಎಸ್ಕೆಸ್ಸೆಸ್ಸೆಫ್ ಶೈಕ್ಷಣಿಕ ವಿಭಾಗದ ಟೀಂ ರೀಸೋರ್ಸ್ ಆಫ್ ಎಜುಕೇಷನ್ ನ್ಯಾಷನಲ್ ಡೆವೆಲಪ್ (ಟ್ರೆಂಡ್) ಸಮಿತಿಯು ಇತ್ತೀಚೆಗೆ ವಿವಿ ಕುಲಪತಿಯೊಂದಿಗೆ ಸಮಾಲೋಚನೆ ನಡೆಸಿ ನಂತರ ಸರಕಾರವು ವಿಧಾನಸೌಧದಲ್ಲಿ ಈ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರು ಉಸ್ತುವಾರಿ ಸಚಿವರು, ಸಂಸದರು ಸೇರಿದಂತೆ ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಿದ್ದಾರೆ.

ಸದ್ಯ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಕೋನಾಜೆ ಕ್ಯಾಂಪಸ್ ಮಾತ್ರವಲ್ಲದೆ ಕಡಬದ ನೆಲ್ಯಾಡಿ ಹಾಗೂ ಹಂಪನಕಟ್ಟೆಯ ಸಂದ್ಯಾ ಕಾಲೇಜು ಸೇರಿರುತ್ತದೆ. ವಿವಿಧ ಕಾರಣಗಳ ನೆಪವೊಡ್ಡಿ ಬಂದ್ ಮಾಡಿದರೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಅವರಿಗೆ ಪರ್ಯಾಯ ವವಸ್ಥೆಯ ನೆಪದಲ್ಲಿ ಬೇರೆ ಕಾಲೇಜಿಗೆ ವರ್ಗಾಯಿಸುವ ಚಿಂತನೆ ನ್ಯಾಯ ಸಮ್ಮತವಲ್ಲ. ಕರ್ನಾಟಕ ವಿಶ್ವವಿದ್ಯಾನಿಲಯ ಕಾಯ್ದೆ ಪ್ರಕಾರ ಪ್ರಥಮ ದರ್ಜೆ ಕಾಲೇಜು ನಡೆಸಲು ಅವಕಾಶವಿರುವುದಿಲ್ಲ. ಈಗಿದ್ದರೂ ಯಾವ ಮಾನದಂಡವಾಗಿ ಕಾಲೇಜು ಆರಂಭಿಸಿದರು ಎಂಬುದೇ ದೊಡ್ಡ ಪ್ರಶ್ನೆ. ಹೀಗಿದ್ದರೂ ಮೂರು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಸರಕಾರದ ಅನುಮತಿ ಇಲ್ಲದಿದ್ದರೆ ಯಾವ ಆದರದ ಮೇಲೆ ಸರ್ಟಿಫಿಕೇಟ್ ನೀಡುವುದು..? ಸರಕಾರವು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಎರಡು ವರ್ಷಗಳ ಹಿಂದೆ ಆರಂಭಗೊಂಡ ನೆಲ್ಯಾಡಿಯಲ್ಲಿರುವ ಪ್ರಥಮ ಧರ್ಜೆ ಕಾಲೇಜು ಕೂಡಾ ವಿ.ವಿ ಯ ಅಧೀನದಲ್ಲಿದ್ದು ಇದೂ ಕೂಡಾ ಅದೇ ಪರಿಸ್ಥಿತಿಯಲ್ಲಿದೆ. ಇದನ್ನು ಸರಕಾರವೇ ನಡೆಸಬಹುದಾದ ಎಲ್ಲಾ ಅವಕಾಶಗಳಿದ್ದರೂ ಗಮನ ಹರಿಸದಿರುವುದು ವಿಷಾದನೀಯ. ಟ್ರೆಂಡ್ ಸಮಿತಿ ಈಗಾಗಲೇ ಸಂಭಂದಪಟ್ಟ ಇಲಾಖೆಗೂ ಜನ ಪ್ರತಿನಿಧಿಗಳಿಗೂ ವಿಷಯ ತಲುಪಿಸಿದ್ದು ಕೂಡಲೇ ಕ್ರಮ ಕೈಗೊಂಡು ಕಾಲೇಜನ್ನು ಮುಂದುವರಿಸುವಂತೆ ಒತ್ತಾಯಿಸಿದೆ.

ಸದ್ರಿ ಕೋಣಾಜೆ ಕಾಲೇಜಿನಲ್ಲಿ ಸ್ಥಗಿತಗೊಳಿಸಿದ ಈ ವರ್ಷದ ಪ್ರವೇಶಾತಿಯನ್ನು ತೆರೆಯುವಂತೆಯೂ ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಾಳಿಲ ಅವರು ತಿಳಿಸಿದ್ದಾರೆ. 

ನಿಯೋಗದಲ್ಲಿ ಟ್ರೆಂಡ್ ಕೇಂದ್ರ ಸಮಿತಿ ಸದಸ್ಯ, ಮಾನವ ಹಕ್ಕು ಹೋರಾಟಗಾರ ಇಕ್ಬಾಲ್ ಬಾಳಿಲ, ಟ್ರೆಂಡ್ ಜಿಲ್ಲಾಧ್ಯಕ್ಷ ಅಬ್ದುಲ್ ಸಮದ್ ಸಾಲೆತ್ತೂರು, ಟ್ರೆಂಡ್ ಜಿಲ್ಲಾ ಜನರಲ್ ಕನ್ವಿನರ್ ಅಬ್ದುಲ್ ಸಲಾಂ ಅಡ್ಡೂರು ಹಾಗೂ ಟ್ರೆಂಡ್ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News