ಮುದರಂಗಡಿ ಬಿಜೆಪಿ ಗ್ರಾಪಂ ಸದಸ್ಯರ ವಿರುದ್ಧ ಪ್ರತಿಭಟನೆ

Update: 2020-07-07 12:45 GMT

ಶಿರ್ವ, ಜು.7: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದೆ, ತಡೆಯೊಡ್ಡುತ್ತಿದ್ದಾರೆಂದು ಆರೋಪಿಸಿ ಬಿಜೆಪಿಯ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಮತ್ತು ರಾಜ್ಯ ಸರಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಸೋಮವಾರ ಮುದರಂಗಡಿ ಗ್ರಾಮ ಪಂಚಾಯತ್ ಕಚೇರಿ ಎದುರು ಧರಣಿ ನಡೆಸಲಾಯಿತು.

ಐವನ್ ಡಿಸೋಜರ ಶಿಫಾರಸ್ಸಿನಂತೆ ಮಂಜೂರಾದ ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆ ಮತ್ತು ಇತರ ಸರಕಾರದ ವಿಶೇಷ ಅನುದಾನದಡಿ ನಿರ್ವಹಿಸುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿರುವ ಗ್ರಾಪಂ ಪಿಡಿಒರನ್ನು ಅಮಾನತು ಮಾಡಲಾಗಿದೆ. ಇದಕ್ಕೆ ಕುಮ್ಮಕು ನೀಡಿದ ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯರ ವರ್ತನೆ ಖಂಡನೀಯ ಎಂದು ಪ್ರತಿಭಟನಕಾರರು ದೂರಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಕಾಪು ಶಾಸಕರು ಯಾವುದೇ ಅನುದಾನಗಳನ್ನು ನೀಡದೆ ಅಭಿವೃದ್ಧಿಯ ವಿರೋಧಿಯಾಗಿದ್ದಾರೆ. ಕಾಂಗ್ರೆಸ್ ಸರಕಾರ ನೀಡಿದ ಅನುದಾನದಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ಇವರು ಬಿಡುತ್ತಿಲ್ಲ. ಸ್ವರ್ಣ ನದಿಯ ಹೂಳೆತ್ತುವ ಹೆಸರಿನಲ್ಲಿ 40 ಕೋಟಿಗೂ ಅಧಿಕ ಮೊತ್ತದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುವ ಮೂಲಕ ಆಡಳಿತ ಪಕ್ಷದವರು ಸರಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ವಿಲ್ಸನ್ ರೊಡ್ರಿಗಸ್ ಶಿರ್ವ, ತಾಪಂ ಸದಸ್ಯರಾದ ಮೈಕಲ್ ರಮೇಶ್ ಡಿಸೋಜ, ವಿ.ಸಿ ಶೇಖಬ್ಬ ಉಚ್ಚಿಲ, ದಿನೇಶ್ ಕೊಟ್ಯಾನ್, ಗ್ರಾಪಂ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ, ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News