ಗುರುಪುರ ದುರಂತ: ನಿರ್ವಸತಿಗರಿಗೆ ಬೊಂಡಂತಿಲದಲ್ಲಿ ನಿವೇಶನ ನೀಡಲು ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

Update: 2020-07-07 13:14 GMT

ಮಂಗಳೂರು, ಜು.7: ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಸಂಭವಿಸಿದ ಗುರುಪುರ ಮಠದಗುಡ್ಡೆ ಮೂಳೂರು ಸೈಟ್ ಸಂಖ್ಯೆ 133ರಿಂದ ಈಗಾಗಲೇ 60ರಷ್ಟು ಮನೆ ಖಾಲಿ ಮಾಡಲಾಗಿದ್ದು, ಸುಮಾರು 90ರಿಂದ 100 ಸಂತ್ರಸ್ತ ಕುಟುಂಬಗಳಿಗೆ ನೀರುಮಾರ್ಗ ಗ್ರಾಪಂ ವ್ಯಾಪ್ತಿಯ ಬೊಂಡಂತಿಲ ಗ್ರಾಮದಲ್ಲಿ ವಸತಿ ನಿರ್ಮಿಸಲು ಜಾಗ ಗುರುತಿಸುವ ಪ್ರಕ್ರಿಯೆ ಆರಂಭಗೊಂಡಿದೆ.

ಉಪ-ತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ಆಸೀಫ್ ಮತ್ತು ಗುರುಪುರ ಗ್ರಾಪಂ ಪಿಡಿಒ ಅಬೂಬಕರ್ ನೇತೃತ್ವದ ತಂಡವು ಮಂಗಳವಾರ ಬೊಂಡಂತಿಲ ಗ್ರಾಮಕ್ಕೆ ಭೇಟಿ ನೀಡಿ, ಜಿಲ್ಲಾಡಳಿತ ಸೂಚಿಸಿದ ಸರ್ವೇ ನಂಬ್ರ 192(1) ಮತ್ತು ಸರ್ವೇ ನಂಬ್ರ 190ರ ಸರಕಾರಿ ಗೋಮಾಳ ಜಾಗ ಪರಿಶೀಲಿಸಿತು.

ನೀರುಮಾರ್ಗ ಗ್ರಾಮ ಲೆಕ್ಕಾಧಿಕಾರಿ ಅಮ್ಜದ್ ಖಾನ್, ತಿರುವೈಲು ಗ್ರಾಮಕರಣಿಕ ಮೆಹಬೂಬ್, ನೀರುಮಾರ್ಗ ಗ್ರಾಮ ಸಹಾಯಕ ಪ್ರಕಾಶ್, ಗುರುಪುರ ಕಂದಾಯ ಗ್ರಾಮ ಸಹಾಯಕ ಅಶ್ರಫ್ ಹಾಗೂ ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಸದಸ್ಯ ರಾಜೇಶ್ ಸುವರ್ಣ ತಂಡದಲ್ಲಿದ್ದರು.

ಗುಡ್ಡದ ಮೇಲಿನ ಈ ಎರಡು ಸರ್ವೇ ನಂಬ್ರದಲ್ಲಿ 20.26 ಎಕ್ರೆ ಜಾಗವಿದೆ. ಇಲ್ಲಿ ಗುರುಪುರ ಮಠದಗುಡ್ಡೆ ಮೂಳೂರು ಸೈಟಿನ 100 ಸಂತ್ರಸ್ತ ಕುಟುಂಬಗಳಿಗೆ (ತಲಾ 2.75 ಸೆಂಟ್ಸ್) ಮನೆ ನಿರ್ಮಿಸಿ ಕೊಡಲು ಸಾಧ್ಯವಿದೆ. ಉಳಾಯಿಬೆಟ್ಟು ಗ್ರಾಪಂ ಮತ್ತು ಮಲ್ಲೂರು ಗ್ರಾಪಂ ಗಡಿ ಪ್ರದೇಶದಲ್ಲಿರುವ ಈ ಸರಕಾರಿ ಗೋಮಾಳ ಜಾಗದಲ್ಲಿ ಉತ್ತಮ ರಸ್ತೆಯೂ ಇದೆ.

‘ಸರಕಾರ ಜಿಲ್ಲಾಡಳಿತಕ್ಕೆ ನೀಡಿರುವ ಆದೇಶದಂತೆ ಜಿಲ್ಲಾಧಿಕಾರಿ ಗುರುಪುರ ಮಠದಗುಡ್ಡೆ ನಿರ್ವಸತಿಗರಿಗೆ ಬೊಂಡಂತಿಲ ಗ್ರಾಮದಲ್ಲಿ ನಿವೇಶನ ಗುರುತಿಸಲು ನಿರ್ದೇಶನ ನೀಡಿದ್ದಾರೆ. ಅದರಂತೆ ಸಮೀಕ್ಷೆ ನಡೆಸಿ, ಜಿಲ್ಲಾಧಿಕಾರಿಗೆ ವರದಿ ನೀಡಲಿದ್ದೇವೆ. ಈ ಬಗ್ಗೆ ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು’ ಎಂದು ಉಪತಹಶೀಲ್ದಾರ್ ಶಿವಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News