ಮುಂಬೈಯಿಂದ ವಾಪಸಾಗಿ ಮನೆಗೆ ಹೋಗಲು ಸಾಧ್ಯವಾಗದೆ ಕಂಗಾಲಾಗಿದ್ದ ಪುರಂದರ ರೈ ಕುಟುಂಬಕ್ಕೆ ಆಶ್ರಯ ನೀಡಿದ ಜಾಬಿರ್

Update: 2020-07-07 14:30 GMT
ಜಾಬಿರ್, ಪುರಂದರ ರೈ ಅವರ ಪುತ್ರ ದೀಪೇಂದ್ರ ರೈ

ಮಂಗಳೂರು, ಜು.7: ಮನೆ ಯಜಮಾನನ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈಯಿಂದ ಮರಳಿದ ಕುಟುಂಬವೊಂದಕ್ಕೆ ಸ್ವತಃ ರಕ್ತಸಂಬಂಧಿಗಳು ಮನೆಪ್ರವೇಶಿಸಲು ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಕುಪ್ಪೆಪದವಿನ ರಿಕ್ಷಾ ಚಾಲಕರೊಬ್ಬರು ಆ ಕುಟುಂಬಕ್ಕೆ ತನ್ನ ಮನೆಯಲ್ಲೇ ಆಶ್ರಯ ನೀಡಿದ ವಿದ್ಯಮಾನ ಬೆಳಕಿಗೆ ಬಂದಿದೆ.

ಪುತ್ತೂರು ಸಮೀಪದ ಕಬಕದ ನಿವಾಸಿಯಾಗಿರುವ ಪುರಂದರ ರೈ ಎಂಬವರ ಕುಟುಂಬಕ್ಕೆ ರಿಕ್ಷಾ ಚಾಲಕನಾಗಿರುವ ಕುಪ್ಪೆಪದವಿನ ಜಾಬಿರ್ ಮಾನವೀಯ ನೆಲೆಯಿಂದ ತನ್ನ ಮನೆಯಲ್ಲೇ ಆಶ್ರಯ ನೀಡಿ ಗಮನ ಸೆಳೆದಿದ್ದಾರೆ. ಜಾಬಿರ್‌ರ ಮಾನವೀಯ ಸೇವೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸುಮಾರು 52 ವರ್ಷ ಪ್ರಾಯದ ಪುರಂದರ ರೈ ಮುಂಬೈಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲೇ ಪತ್ನಿ ಮತ್ತು ಮಕ್ಕಳ ಜೊತೆ ವಾಸವಾಗಿದ್ದರು. ಈ ಮಧ್ಯೆ ಕೊರೋನ-ಲಾಕ್‌ಡೌನ್ ಸಂದರ್ಭ ಕಿಡ್ನಿ ಸಮಸ್ಯೆಗೆ ತುತ್ತಾದರು. ತಕ್ಷಣ ಅವರನ್ನು ಅಲ್ಲಿನ ಎರಡು ಆಸ್ಪತ್ರೆಗೆ ದಾಖಲಿಸಲಾಯಿತು. ಹಾಗೇ 5-6 ಲಕ್ಷ ರೂ. ಖರ್ಚು ಮಾಡಿದರೂ ಕೂಡ ಪುರಂದರ ರೈ ಗುಣಮುಖರಾಗಲಿಲ್ಲ. ಅತ್ತ ಖಾಸಗಿ ಕಂಪೆನಿಯ ಕೆಲಸವೂ ಇಲ್ಲವಾಯಿತು. ಹಾಗಾಗಿ ಉಪಾಯವಿಲ್ಲದೆ ಈ ಕುಟುಂಬ ಮುಂಬೈಯಿಂದ ಜೂ.21ರಂದು ಮಂಗಳೂರಿಗೆ ಆಗಮಿಸಿತ್ತು. ಹಾಗೇ ಕಬಕದ ಮನೆಗೆ ಹೋಗಲು ಅಣಿಯಾದರೂ ಕೂಡ ‘ಕ್ವಾರಂಟೈನ್ ಅವಧಿ ಮುಗಿದ ಬಳಿಕ ಬನ್ನಿ... ಈಗ ಬೇಡ’ ಎಂಬ ಮಾತು ಮನೆಮಂದಿಯಿಂದ ಬಂತು. ಕಂಗಾಲಾದ ಈ ಕುಟುಂಬದ ಸಂಕಷ್ಟವನ್ನು ತಿಳಿದುಕೊಂಡ ಜಾಬಿರ್ ತಕ್ಷಣ ನೆರವಿಗೆ ಧಾವಿಸಿದ್ದಾರೆ. ಕಳೆದ 18 ದಿನದಿಂದ ಎಲ್ಲಾ ವ್ಯವಸ್ಥೆ ಕಲ್ಪಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ ಕುಪ್ಪೆಪದವಿನ ಜಾಬಿರ್ ‘ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಬಾಡಿಗೆಗೆ ರಿಕ್ಷಾ ಓಡಿಸುತ್ತಿರುವ ನಾನು ಜೂ.21ರಂದು ತಡರಾತ್ರಿ 2:30ರ ವೇಳೆಗೆ ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನೊಳಗೊಂಡ ಕುಟುಂಬವನ್ನು ಕಂಡೆ. ಹತ್ತಿರ ಹೋಗಿ ಬಾಡಿಗೆಯ ಬಗ್ಗೆ ಮಾತನಾಡಿದಾಗ ‘ನಮ್ಮ ಸಂಬಂಧಿಕರು ಬರಲಿದ್ದು, ಅವರಿಗಾಗಿ ಕಾಯುತ್ತಿದ್ದೇವೆ’ ಎಂದರು. ಮುಂಜಾನೆಯಾದರೂ ಈ ಕುಟುಂಬ ಅಲ್ಲೇ ನಿಂತಿದ್ದನ್ನು ಕಂಡು ಮತ್ತೆ ವಿಚಾರಿಸಿದೆ. ಅವರು ಸಂಕಷ್ಟವನ್ನು ಹೇಳಿಕೊಂಡರು. ಆ ಮಾತು ಕೇಳಿದ ಬಳಿಕ ಏನಾದರೊಂದು ಸಹಾಯ ಮಾಡಲು ನಿರ್ಧರಿಸಿದೆ. ಹಾಗೇ ಸಹೋದರನ ಕಾರು ತರಿಸಿ ಈ ಕುಟುಂಬವನ್ನು ಬಂಟ್ವಾಳದ ವಗ್ಗದ ಸರಕಾರಿ ಶಾಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ. ಮನೆ ಯಜಮಾನ ಪುರಂದರ ರೈ ಕಿಡ್ನಿ ರೋಗಿಯಾಗಿದ್ದು, ಅವರಿಗೆ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಬೇಕಿತ್ತು. ಹಾಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸುವ ಬಗ್ಗೆಯೂ ಮಾತನಾಡಿದೆ. ಆದರೆ ಅಲ್ಲಿ ಚಿಕಿತ್ಸೆಯ ವೆಚ್ಚ ದುಬಾರಿಯಾದ ಕಾರಣ ಸರಕಾರಿ ಅಧಿಕಾರಿಗಳ ಸಹಾಯದಿಂದ ಬಂಟ್ವಾಳದ ತಾಲೂಕು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದೆ. 

ಈ ಮಧ್ಯೆ ವಗ್ಗದ ಸರಕಾರಿ ಶಾಲೆಯಲ್ಲಿದ್ದ ಪುರಂದರ ರೈಯ ಪತ್ನಿ ಮತ್ತು 22ರ ಹರೆಯದ ಮಗಳು ಮತ್ತು 19ರ ಹರೆಯದ ಮಗನ ಕ್ವಾರಂಟೈನ್ ಅವಧಿಯೂ ಮುಗಿದಿತ್ತು. ಕಬಕಾದಲ್ಲಿರುವ ಮನೆಗೆ ಹೋಗಲು ಅವರು ಮತ್ತೆ ಮುಂದಾದರೂ ಅವರಿಗೆ ಅಲ್ಲಿ ಪ್ರವೇಶ ಸಿಗುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂತು. ಉಪಾಯವಿಲ್ಲದೆ ನಾನು ನನ್ನ ಮನೆ ಸಮೀಪದಲ್ಲೇ ಇರುವ ಹಳೆಯ ಮನೆಯಲ್ಲಿ ಕಳೆದ 10 ದಿನದಿಂದ ಉಳಕೊಳ್ಳಲು ವ್ಯವಸ್ಥೆ ಮಾಡಿದ್ದೇನೆ. ಈ ಕುಟುಂಬಕ್ಕೆ ಮುಂಬೈಗೆ ಮರಳಲೂ ಸಾಧ್ಯವಿಲ್ಲ. ಯಾಕೆಂದರೆ ಅವರು ಅಲ್ಲಿ ಮನೆ ಖಾಲಿ ಮಾಡಿಕೊಂಡು ಬಂದಿದ್ದು, ಸಾಮಗ್ರಿಗಳನ್ನೆಲ್ಲಾ ಪಂಪ್‌ವೆಲ್‌ನ ಗೋದಾಮಿನಲ್ಲಿಟ್ಟಿದ್ದಾರೆ. ಸದ್ಯ ಸ್ಥಳೀಯ ಗಲ್ಫ್‌ಗೈಸ್ ಸಹಿತ ಸಮಾಜಮುಖಿ ಯುವಕರ ಸಹಕಾರದಿಂದ ಊಟ, ತಿಂಡಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕುಟುಂಬಕ್ಕೆ ಸೂರಿನ ವ್ಯವಸ್ಥೆ ಕಲ್ಪಿಸಲು ಬಂಟರ ಸಂಘದ ಮುಖಂಡರ ಜೊತೆಯೂ ಮಾತನಾಡಿದ್ದೇನೆ. ಸೂಕ್ತ ವ್ಯವಸ್ಥೆ ಆಗುವವರೆಗೆ ಇಲ್ಲೇ ಇರಲು ಯಾವುದೇ ಅಡ್ಡಿಯಿಲ್ಲ’ ಎಂದು ತಿಳಿಸಿದ್ದಾರೆ.

‘ನಾನು ನಗರದ ಕಾರ್‌ಸ್ಟ್ರೀಟ್‌ನ ಸರಕಾರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದೆ. ತಂದೆ, ತಾಯಿ ಮತ್ತು ಅಕ್ಕ ಮುಂಬೈಯಲ್ಲಿದ್ದರು. ತಂದೆಗೆ ಕಿಡ್ನಿಯ ಸಮಸ್ಯೆಯಾದ ಬಳಿಕ ನಾನು ಕೂಡ ಮುಂಬೈಗೆ ಹೋದೆ. ಅಲ್ಲಿ ಐದಾರು ಲಕ್ಷ ರೂ. ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲ. ವಾಪಸ್ ಊರಿಗೆ ಬಂದೆವು. ನಮ್ಮ ಕೋವಿಡ್ 19 ವರದಿಯು ನೆಗೆಟಿವ್ ಬಂದಿದೆ. ನಿಯಮದಂತೆ ಕ್ವಾರಂಟೈನ್ ಕೂಡ ಮಾಡಿದೆವು. ಬಳಿಕವೂ ನಮ್ಮ ತಂದೆಯ ಒಡಹುಟ್ಟಿದವರು ನಮ್ಮನ್ನು ಮನೆಗೆ ಸೇರಿಸಿಕೊಳ್ಳಲಿಲ್ಲ. ಅವರಿಗೆ ನಮ್ಮ ಬಗ್ಗೆ ಕೊರೋನದ ಭಯವೋ ಏನೋ, ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಅವರು ನಮ್ಮನ್ನು ಬೀದಿ ಪಾಲು ಮಾಡಿದರು. ನಮಗೆ ಕುಪ್ಪೆಪದವಿನ ಜಾಬಿರಣ್ಣ ಆಪತ್ಭಾಂಧವರಂತೆ ಅಚಾನಕ್ ಸಿಗದೇ ಇದ್ದರೆ ನಾವಿಂದು ಬೀದಿಯಲ್ಲಿರಬೇಕಿತ್ತೋ ಏನೋ... ಜೂ.21ರಿಂದ ಈವರೆಗೆ ಅವರು ನಮ್ಮ ಕೈ ಬಿಡಲಿಲ್ಲ. ನಮಗೆ ಅವರ ಹಳೆಯ ಮನೆಯನ್ನೇ ಬಿಟ್ಟುಕೊಟ್ಟಿದ್ದಾರೆ. ಊಟ, ತಿಂಡಿಯ ವ್ಯವಸ್ಥೆಯನ್ನು ಕೂಡ ಮಾಡಿಕೊಡುತ್ತಿದ್ದಾರೆ. ಆ ಮನೆಯಲ್ಲಿ ಶೌಚಾಲಯವಿಲ್ಲ. ಹಾಗಾಗಿ ನಾವು ಶೌಚ, ಸ್ನಾನಕ್ಕೆ ಜಾಬಿರಣ್ಣನ ಮನೆಯನ್ನೇ ಬಳಸುತ್ತಿದ್ದೇವೆ. ನಮ್ಮನ್ನು ಜಾಬಿರಣ್ಣ ಮತ್ತವರ ಮನೆಯವರು ಎಂದೂ ಅನ್ಯರಂತೆ ಕಾಣಲಿಲ್ಲ. ಸ್ವಂತ ಮನೆಯವರ ಹಾಗೇ ಕಾಣುತ್ತಿದ್ದಾರೆ. ಅವರೊಂದಿಗೆ ಊರಿನ ಹಲವು ಮಂದಿ ಯುವಕರು ಕೂಡ ಕೈ ಜೋಡಿಸಿದ್ದಾರೆ. ಕಷ್ಟಕಾಲಕ್ಕೆ ರಕ್ತ ಸಂಬಂಧಿಗಳು ನಮ್ಮನ್ನು ಬೀದಿಪಾಲು ಮಾಡಿದರೂ ಕೂಡ ಜಾಬಿರಣ್ಣ ಮತ್ತವರ ಸ್ನೇಹಿತರು ಮಾಡಿದ ಉಪಕಾರವನ್ನು ನಾವೆಂದೂ ಈ ಜನ್ಮದಲ್ಲಿ ಮರೆಯಲಾರೆವು’ ಎಂದು ಪುರಂದರ ರೈಯ ಪುತ್ರ ದೀಪೇಂದ್ರ ರೈ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News