ಅಂತಾರಾಷ್ಟ್ರೀಯ ಮಾನ್ಯತೆ ಪಡೆಯುವತ್ತ ಪಡುಬಿದ್ರೆ ಬ್ಲೂ ಫ್ಲಾಗ್ ಬೀಚ್

Update: 2020-07-07 15:57 GMT
ಫೈಲ್ ಚಿತ್ರ

ಪಡುಬಿದ್ರೆ, ಜು.7: ಪಡುಬಿದ್ರೆಯ ಎಂಡ್‌ಪಾಯಿಂಟ್ ಪ್ರದೇಶ ಶೀಘ್ರವೇ ಅಂತಾರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆಯುವ ಸಾಧ್ಯತೆ ಉಜ್ವಲಗೊಂಡಿದೆ. ಈ ಯೋಜನೆ ಇದೀಗ ಅಂತಿಮ ಹಂತದಲ್ಲಿದ್ದು, ಇದಕ್ಕೆ ಸಂಬಂಧಿಸಿದ ಕಾಮಗಾರಿ ಕೂಡ ಮುಕ್ತಾಯದ ಹಂತದಲ್ಲಿದೆ.

ಸ್ವಚ್ಛ, ಶುದ್ಧ ಮತ್ತು ಆಕರ್ಷಕ ಪ್ರವಾಸಿ ಕಡಲತೀರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಬ್ಲೂ ಫ್ಲಾಗ್ ಪ್ರಮಾಣ ಪತ್ರವನ್ನು ಡೆನ್ಮಾರ್ಕ್‌ನ ಫೌಂಡೇಶನ್ ಫಾರ್ ಎನ್ವೆಯಾರ್‌ಮೆಂಟ್ ಎಜುಕೇಶನ್ ಸಂಸ್ಥೆ ನೀಡಲಿದೆ. ಈ ಸಂಸ್ಥೆಯು ವಿಶ್ವದ 60 ರಾಷ್ಟ್ರಗಳ ಸದಸ್ಯತ್ವ ಹೊಂದಿದ್ದು, 65 ವಿವಿಧ ಸಂಘಟನೆಗಳು ಇದರ ಜೊತೆಗಿವೆ. ಈ ಸಂಸ್ಥೆ ಇದುವರೆಗೆ ಜಪಾನ್‌ನ ಎರಡು ಕಡಲ ಕಿನಾರೆಗಳಿಗೆ ಪ್ರಮಾಣ ಪತ್ರ ನೀಡಿದೆ.

ಈ ಪ್ರತಿಷ್ಠಿತ ಪ್ರಮಾಣ ಪತ್ರ ಲಭಿಸಿದಲ್ಲಿ ಕಡಲ ತೀರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಕೇಂದ್ರದ ನಿರ್ಣಾಯಕ ಮಂಡಳಿ ಪರಿಶೀಲನೆ ನಡೆಸಲಿದ್ದು, ಈ ಪರಿಶೀಲನೆಯ ಬಳಿಕ ಡೆನ್ಮಾರ್ಕ್‌ನ ಅಂತಾರಾಷ್ಟ್ರೀಯ ನಿರ್ಣಾಯಕ ಮಂಡಳಿಯು ಬ್ಲೂಫ್ಲಾಗ್ ಮಾನ್ಯತೆ ಪ್ರಮಾಣ ಪತ್ರ ನೀಡಲಿದೆ.

ಕೇಂದ್ರ ಪರಿಸರ ಮಂತ್ರಾಲಯವು ರಾಜ್ಯದಲ್ಲಿ ಕಾರವಾರ ಹಾಗೂ ಕಾಮಿನಿ ನದಿ ಸಮುದ್ರ ಸೇರುವ ಪಡುಬಿದ್ರೆ ಎಂಡ್‌ಪಾಯಿಂಟ್ ಬೀಚ್‌ನ್ನು ಬ್ಲೂಫ್ಲಾಗ್ ಬೀಚ್ ಎಂದು ಪರಿಗಣಿಸಲು ಕಳೆದ ವರ್ಷ ಅನುಮೋದನೆ ನೀಡಿತ್ತು. ಗುರ್‌ಗಾಂವ್‌ನ ಎ ಟು ಝಡ್ ಇನ್‌ಪ್ರಾ ಸರ್ವಿಸಸ್ ಲಿಮಿಟೆಡ್ ಸಂಸ್ಥೆ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿತ್ತು. ಕೇಂದ್ರ ಸರಕಾರ ಯೋಜನೆಗೆ 8 ಕೋಟಿ ರೂ. ಹಾಗೂ ರಾಜ್ಯ ಸರಕಾರ ವಿವಿಧ ಮೂಲ ಸೌಕರ್ಯಗಳ ಅಭಿವೃದ್ಧಿಗೆ 2.5 ಕೋಟಿ ರೂ. ಅನುದಾನ ನೀಡಿವೆ.

ಎಂಡ್‌ಪಾಯಿಂಟ್ ಬೀಚ್‌ನಲ್ಲಿ ಮಾನ್ಯತೆಗೆ ಪೂರಕವಾಗಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಸಿಸಿ ಕ್ಯಾಮರಾ ಹಾಗೂ ನಿಯಂತ್ರಣ ಕೊಠಡಿ, ಮಕ್ಕಳ ಆಟಿಕೆ ಸಾಮಾಗ್ರಿಗಳು, ಪ್ರಥಮ ಚಿಕಿತ್ಸಾ ಕೊಠಡಿ, ಘನತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಸೋಲಾರ್ ಪ್ಯಾನಲ್ ಅಳವಡಿಸಿ ಬೀಚ್‌ಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಿ ಬೀದಿ ದೀಪಗಳನ್ನು ಈಗಾಗಲೇ ಅಳವಡಿಸಲಾಗಿದೆ.

ಪಡುಬಿದ್ರಿ ಕಡಲ ತೀರದಲ್ಲಿ ಈ ಯೋಜನೆ ರೂಪುಗೊಂಡಿದ್ದು, ಹೆಚ್ಚಿನೆಲ್ಲಾ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಮುಂದಿನ ದಿನಗಳಲ್ಲಿ ಹೋಮ್‌ಸ್ಟೇ, ವ್ಯಾಪಾರ ವಹಿವಾಟು, ಪ್ರವಾಸೋದ್ಯಮದ ಮೂಲಕ ಇನ್ನಷ್ಟು ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಕೇಂದ್ರ ನಿರ್ಣಾಯಕ ಮಂಡಳಿ ಪರಿಶೀಲನೆ ಬಳಿಕ ಅಂತಾರಾಷ್ಟ್ರೀಯ ನಿರ್ಣಾಯಕ ಮಂಡಳಿಯು ಪರಿಶೀಲನೆ ನಡೆಸಲಿದೆ. ಬಳಿಕ ಬ್ಲೂಫ್ಲಾಗ್ ಪ್ರಮಾಣ ಪತ್ರ ನೀಡಲಿದೆ. ಇಲ್ಲಿನ ಬೀಚ್ ಅಭಿವೃದ್ಧಿಗೆ ಇನ್ನಷ್ಟು ಯೋಜನೆಗಳನ್ನು ರೂಪಿಸಲಾಗಿದ್ದು, ಹಂತ ಹಂತವಾಗಿ ಇವುಗಳನ್ನು ಅನುಷ್ಠಾನಗೊಳಿಸಿ ಈ ಕಡಲತೀರವನ್ನು ಅಭಿವೃದ್ಧಿಪಡಿಸಲಾಗುವುದು.
ಡಾ.ಚಂದ್ರಶೇಖರ್ ನಾಯ್ಕ, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News