ಮೂಡುಬಿದಿರೆಯಲ್ಲಿ ಜು. 20ರವರೆಗೆ ಸ್ವಯಂ ಪ್ರೇರಿತ ಲಾಕ್ ಡೌನ್ ಗೆ ನಿರ್ಧಾರ

Update: 2020-07-07 17:24 GMT

ಮೂಡುಬಿದಿರೆ: ಕೊರೋನಾ ಸೋಂಕು ತಡೆಗೆ ಮುನ್ನೆಚ್ಚರಿಕೆಯ ಅಂಗವಾಗಿ ಮುಂದಿನ ಜು. 20ರವರೆಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಅಪರಾಹ್ನದ ಬಳಿಕ ಸ್ವಯಂಪ್ರೇರಿತ ಲಾಕ್ ಡೌನ್ ಗೆ ನಿರ್ಧರಿಸಲಾಗಿದೆ. ಮಂಗಳವಾರ ಸ್ವರ್ಣ ಮಂದಿರದಲ್ಲಿ ವರ್ತಕರ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಜನ ಪ್ರತಿನಿಧಿಗಳು,ಅಧಿಕಾರಿಗಳು, ಪ್ರಮುಖರ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.  

ಸಭೆಯಲ್ಲಿ ಎಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನ ಆತಂಕ, ಸುರಕ್ಷುತ ಅಂತರ ಪಾಲನೆ, ಮುನ್ನೆಚ್ಚರಿಕೆ,  ಜನರ ಆರೋಗ್ಯದ ದೃಷ್ಟಿಯಿಂದ ಪುರಸಭಾ ವ್ಯಾಪ್ತಿಯೊಳಗೆ ಅಪರಾಹ್ನ 2ರವರೆಗೆ ಮಾತ್ರ ವ್ಯವಹಾರ, ಸಾರ್ವಜನಿಕ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ. ಬಳಿಕ ಖಾಸಗಿ ಬಸ್ ಸೇರಿದಂತೆ, ರಿಕ್ಷಾ, ಕಾರು ಇತರ ವಾಹನಗಳ ಸಂಚಾರವನ್ನು ಕೂಡ ನಿರ್ಬಂಧಿಸಲಾಗಿದೆ. ಬಾರ್, ವೈನ್‍ಶಾಪ್‍ಗಳು ಕೂಡ ಅರ್ದ ದಿನ ಮಾತ್ರ ತೆರೆದಿರುತ್ತವೆ ಎಂದವರು ಪ್ರಕಟಿಸಿದರು. 

ಕೂಲಿ ಕಾರ್ಮಿಕರಿಗೆ, ಸರಕಾರಿ ನೌಕರರಿಗೆ, ಹಾಗೂ ಕೆಲಸಕ್ಕೆ ಹೋಗುವವರಿಗೆ ಸ್ವಯಂಪ್ರೇರಿತ ಲಾಕ್‍ಡೌನ್‍ನಿಂದ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಆದರೆ ಅಪರಾಹ್ನದ ಬಳಿಕ ಅನಗತ್ಯ ಓಡಾಡುವವರ ವಿರುದ್ಧ ದಂಡ, ಕೇಸು ದಾಖಲಿಸುವ, ಸೂಕ್ತ ಕಾನೂನು ಕ್ರಮಕ್ಕೆ ಪೋಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದನ್ನು  ಕಡ್ಡಾಯ ಮಾಡಲಾಗಿದೆ. ಈಗಾಗಲೇ ನಿಗದಿಯಾದ ಸಭೆ ಸಮಾರಂಭಗಳು ಸರಕಾರದ ಮಾರ್ಗಸೂಚಿಯಂತೆ ಅನುಮತಿ ಪಡೆದೇ ನಡೆಸಬೇಕು.  ಕೊರೊನ ನಿಯಂತ್ರಣಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕರಿಸಬೇಕು ಎಂದು ಶಾಸಕರು ವಿನಂತಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಸ್ವಯಂಪ್ರೇರಿತ ಲಾಕ್ ಡೌನ್ ಸ್ವಾಗತಾರ್ಹ. ಆದರೆ ಕೂಲಿಕಾರ್ಮಿಕರಿಗೆ ಮತ್ತು ನಿತ್ಯ ಕೆಲಸಕ್ಕೆ ಹೋಗುವವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆಯಿತ್ತರು. ತಹಶಿಲ್ದಾರ್ ಅನಿತಾಲಕ್ಷ್ಮಿ, ಪುರಸಭೆ ಮುಖ್ಯಾಧಿಕಾರಿ ಇಂದು, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಕಾರ್ಮಿಕ ಮುಖಂಡ ಯಾದವ ಶೆಟ್ಟಿ, ಜೆಡಿಎಸ್ ಮುಖಂಡ ತೋಡಾರು ದಿವಾಕರ ಶೆಟ್ಟಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News