ಕೇರಳಿಗರಿಂದ ಮಂಗಳೂರು ಪ್ರವೇಶಕ್ಕೆ ನಿಷೇಧ: ಗಡಿಯಲ್ಲಿ ಗೊಂದಲದ ವಾತಾವರಣ

Update: 2020-07-07 18:09 GMT

ಉಳ್ಳಾಲ, ಜು.7: ದ.ಕ. ಜಿಲ್ಲೆಯಲ್ಲಿ ಕೊರೋನ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇರಳದಿಂದ ಉದ್ಯೋಗ ಅಥವಾ ಇನ್ನಿತರ ಕೆಲಸ ಕಾರ್ಯಗಳ ನಿಮಿತ್ತ ಪ್ರತಿನಿತ್ಯ ಮಂಗಳೂರಿಗೆ ಪ್ರಯಾಣಿಸುವುದಕ್ಕೆ ಕೇರಳ ಸರಕಾರ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಗಡಿಭಾಗವಾದ ತಲಪಾಡಿ ಗಡಿಯಲ್ಲಿ ಪಾಸ್ ವಿಚಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪ್ರತಿನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಜನರಿಗೆ ಕೇರಳದ ದಿಢೀರ್ ನಿರ್ಧಾರದಿಂದ ತೊಂದರೆಯಾಗಿದ್ದು, ಈ ಬಗ್ಗೆ ಕೇರಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಿಂದ ಕೇರಳದ ಕಡೆ ಅಥವಾ ಕೇರಳದಿಂದ ಕರ್ನಾಟಕ ರಾಜ್ಯಕ್ಕೆ ಪಾಸ್ ಇದ್ದವರಿಗೆ ಹೋಗಲು ಅವಕಾಶ ಇದೆ. ಆದರೆ ಒಮ್ಮೆ ಹೋದವರು 25ದಿನ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ. ಇದರಿಂದ ಕೆಲವರು ಅಸಮಾಧಾನಗೊಂಡು ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ಉಂಟಾಯಿತು. ಅಲ್ಲದೆ 100ಕ್ಕೂ ಅಧಿಕ ಮಂದಿ ಸ್ಥಳದಲ್ಲಿ ಜಮಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಮಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗಿರುವುದರಿಂದ ಕೇರಳ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಮಂಗಳೂರು ಪ್ರವೇಶಕ್ಕೆ ಕೇರಳದಿಂದ ನೀಡುತ್ತಿದ್ದ ನಿತ್ಯದ ಪಾಸ್ ರದ್ದು ಮಾಡಿದೆ. ಕೇರಳದ ಕಾಸರಗೋಡು, ಮಂಜೇಶ್ವರ ಭಾಗದಿಂದ ಮಂಗಳೂರಿಗೆ ಬರುತ್ತಿದ್ದ ಜನರು, ಉದ್ಯೋಗ ಮತ್ತು ವ್ಯಾಪಾರದ ಹಿನ್ನೆಲೆ ನಿತ್ಯದ ಪಾಸ್ ಬಳಸಿ ಪ್ರಯಾಣಿಸುತ್ತಿದ್ದರು. ಹಾಗೆ ಮಂಗಳೂರಿಗೆ ಬಂದು ಹೋದ ಐದು ಮಂದಿ ಕೇರಳಿಗರಿಗೆ ಕೊರೋನ ಪಾಸಿಟಿವ್ ಆಗಿತ್ತು. ಸರಕಾರದ ನಿರ್ಧಾರದಂತೆ ಇನ್ನು ಮುಂದೆ ತಿಂಗಳಿಗೊಮ್ಮೆ ಮಾತ್ರ ಮಂಗಳೂರಿಗೆ ಪ್ರಯಾಣಿಸಬಹುದು. ಅಥವಾ ಮಂಗಳೂರಿನಲ್ಲೇ ಉಳಿದುಕೊಂಡು 28 ದಿನಕ್ಕೊಮ್ಮೆ ಕೇರಳಕ್ಕೆ ಬಂದು ಹೋಗಲು ಅವಕಾಶ ಇದೆ.

ಕೇರಳದಿಂದ ಉದ್ಯೋಗ ನಿಮಿತ್ತ ಮಂಗಳೂರಿಗೆ ಬಂದವರಿಗೆ ಅದೇ ದಿನ ವಾಪಸ್ ಹೋಗಲು ಅವಕಾಶ ನೀಡಬೇಕು. ಕೆಲಸ ಮಾಡುವ ಜಾಗದಲ್ಲಿ ಸುದೀರ್ಘ ಕಾಲ ಕ್ವಾರಂಟೈನ್ ನಿಲ್ಲಬೇಕು ಎಂಬ ನಿಯಮ ಸರಿಯಲ್ಲ. ಕೊರೋನ ಎಲ್ಲ ಅಧಿಕಾರಿಗಳಿಗೂ ಬಂದಿದೆ. ಈ ಕಾರಣ ಮುಂದಿಟ್ಟುಕೊಂಡು ಕೆಲಸದವರಿಗೆ ಕಷ್ಟ ಕೊಡಬೇಕಾಗಿಲ್ಲ.
ಸಿದ್ದೀಕ್ ತಲಪಾಡಿ, ಸದಸ್ಯರು, ತಾಪಂ ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News