ಶಿಕ್ಷೆಯ ವಿರುದ್ಧ ಮೇಲ್ಮನವಿ ಅರ್ಜಿ ಸಲ್ಲಿಸಲು ಕುಲಭೂಷಣ್ ಜಾಧವ್ ನಿರಾಕರಿಸಿದ್ದಾರೆ ಎಂದ ಪಾಕ್

Update: 2020-07-08 10:18 GMT

ಇಸ್ಲಾಮಾಬಾದ್: ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಬಲೂಚಿಸ್ತಾನದಲ್ಲಿ ಮಾರ್ಚ್ 2016ರಲ್ಲಿ ಬಂಧಿಸಲ್ಪಟ್ಟು ನಂತರ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್  ಜಾಧವ್  ಅವರ ಜತೆ ಕಾನ್ಸುಲೇಟ್ ಕಚೇರಿ ಮೂಲಕ ಎರಡನೇ ಬಾರಿ ಸಂಪರ್ಕ ಸಾಧಿಸುವ ಆಫರ್ ಅನ್ನು ಪಾಕಿಸ್ತಾನ ಭಾರತಕ್ಕೆ ಮಾಡಿದೆ.

``ಮೊದಲನೇ ಬಾರಿ ಅವರು ತಮ್ಮ ತಾಯಿ ಹಾಗೂ ಪತ್ನಿಯನ್ನು ಭೇಟಿಯಾಗಿದ್ದರು ಈ ಬಾರಿ ನಾವು ಅವರ ತಂದೆ ಮತ್ತು ಪತ್ನಿಯನ್ನು ಭೇಟಿಯಾಗಲು ಅವರಿಗೆ ಅವಕಾಶ ನೀಡುತ್ತೇವೆ,'' ಎಂದು ಬುಧವಾರ ಹೆಚ್ಚುವರಿ ಅಟಾರ್ನಿ ಜನರಲ್ ಅಹ್ಮದ್ ಇರ್ಫಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನಿರ್ದಿಷ್ಟ ಅವಧಿಯೊಳಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಅನುಮತಿಸುವ ಅಧ್ಯಾದೇಶವನ್ನು ಪಾಕಿಸ್ತಾನ ಈ ವರ್ಷದ ಮೇ ತಿಂಗಳಲ್ಲಿ ಜಾರಿಗೆ ತಂದಿದ್ದರೂ ಜಾಧವ್ ಅವರು ತಮಗೆ ವಿಧಿಸಲಾದ ಶಿಕ್ಷೆಯ ವಿರುದ್ಧ ಮೇಲ್ಮನವಿ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಂತಿಮ ಗಡುವಿನ ಮೊದಲು ಮೇಲ್ಮನವಿ ಅರ್ಜಿ ಸಲ್ಲಿಸುವಂತೆ ಪಾಕಿಸ್ತಾನ ಸರಕಾರ ಕೂಡ ಭಾರತೀಯ ಹೈಕಮಿಷನ್‍ಗೆ ಸತತ  ಪತ್ರ ಬರೆದಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ.

ಜಾಧವ್ ವಿರುದ್ಧ ಪಾಕಿಸ್ತಾನ ಮಾಡಿರುವ ಆರೋಪಗಳನ್ನು ಭಾರತ ಈಗಾಗಲೇ ನಿರಾಕರಿಸಿದ್ದು , ಅವರು ಉದ್ಯಮ ನಡೆಸುತ್ತಿದ್ದ ಛಹಬರ್ ಎಂಬ ಇರಾನ್ ಬಂದರಿನಿಂದ ಅವರನ್ನು ಪಾಕ್ ಅಧಿಕಾರಿಗಳು ಅಪಹರಿಸಿದ್ದರು ಎಂದು ಹೇಳಿಕೊಂಡಿದೆ. ಮೇ 2017ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಮರಣದಂಡನೆಗೆ ತಡೆ ಹೇರಿತ್ತು. ಮುಂದೆ ಜುಲೈ 17ರಂದು ಮರಣದಂಡನೆಗೆ ತಡೆ ಮುಂದುವರಿಯುವುದು ಎಂದು ಅದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News