ಕೇರಳ ಚಿನ್ನ ಕಳ್ಳಸಾಗಣಿಕೆ ಪ್ರಕರಣ: ಸಿಬಿಐ ತನಿಖೆ ಕೋರಿ ಪ್ರಧಾನಿಗೆ ಕಾಂಗ್ರೆಸ್ ಪತ್ರ

Update: 2020-07-08 17:14 GMT

ತಿರುವನಂತಪುರಂ, ಜು.8: ಕೇರಳದಲ್ಲಿ ಬೆಳಕಿಗೆ ಬಂದ ಚಿನ್ನ ಕಳ್ಳಸಾಗಣಿಕೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಕೇರಳ ಕಾಂಗ್ರೆಸ್ ಬುಧವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.

ಜೊತೆಗೆ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯದ ತನಿಖೆಯೂ ನಡೆಯಬೇಕು ಎಂದು ಕೇರಳ ವಿಧಾನಸಭೆಯ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ (ಸಿಎಂಒ)ಯಲ್ಲಿರುವವರು ಕಳ್ಳಸಾಗಣೆಗಾರರಿಗೆ ನೀಡುತ್ತಿರುವ ನೆರವು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಹಾಗೂ ಕಳ್ಳಸಾಗಾಣೆಗಾರರ ನಡುವಿರುವ ಹೊಂದಾಣಿಕೆ ಅತ್ಯಂತ ಆತಂಕಕಾರಿಯಾಗಿದ್ದು, ಈ ಬಗ್ಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಅಧಿಕಾರ ಮತ್ತು ಸ್ವಾತಂತ್ರ್ಯವಿರುವ ತನಿಖಾ ಏಜೆನ್ಸಿಯಿಂದ ತನಿಖೆ ನಡೆಸಬೇಕು ಎಂದು ಚೆನ್ನಿತ್ತಲ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಶಿವಶಂಕರ್ ವಿಜಯನ್ ರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನಿತ್ತಲ, ಪ್ರಕರಣದ ತನಿಖೆ ತನ್ನನ್ನು ತಲುಪಬಹುದು ಎಂಬ ಹೆದರಿಕೆಯಿಂದ ಮುಖ್ಯಮಂತ್ರಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಯುಡಿಎಫ್ ಒತ್ತಾಯಿಸುತ್ತದೆ. ಈ ಹೈಪ್ರೊಫೈಲ್ ಚಿನ್ನ ಕಳ್ಳಸಾಗಣಿಕೆ ಪ್ರಕರಣದಲ್ಲಿ ಸಿಎಂಒ ಮಧ್ಯಪ್ರವೇಶಿಸಿ ಆರೋಪಿ ಸ್ವಪ್ನಾಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಶಿವಶಂಕರ್ ವಿಜಯನ್ ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿದೆ. ಮುಖ್ಯಮಂತ್ರಿಯೂ ಆಕೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಚೆನ್ನಿತ್ತಲ ಆರೋಪಿಸಿದ್ದಾರೆ.

ಈ ಮಧ್ಯೆ, ತಾನು ಸಿಬಿಐ ತನಿಖೆಗೆ ಸಿದ್ಧ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸರಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸ್ವಪ್ನಾ ಸುರೇಶ್ ಳನ್ನು ನೇಮಕ ಸಂಸ್ಥೆಯ ಮೂಲಕ ಮಾಹಿತಿ ತಂತ್ರಜ್ಞಾನ ಇಲಾಖೆಗೆ ನೇಮಕ ಮಾಡಿಕೊಳ್ಳಲಾಗಿದೆ. ಆಕೆಯ ಹೆಸರನ್ನು ಕೈಬಿಡುವಂತೆ ಮುಖ್ಯಮಂತ್ರಿಯ ಕಚೇರಿಯಿಂದ ಯಾರೊಬ್ಬರೂ ಕರೆ ಮಾಡಿಲ್ಲ ಎಂದು ಕಸ್ಟಮ್ಸ್ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ ಎಂದು ವಿಜಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News