ಬಿಎಸ್-4 ವಾಹನಗಳ ಮಾರಾಟಕ್ಕೆ ಅವಕಾಶ: ತೀರ್ಪು ಹಿಂಪಡೆದ ಸುಪ್ರೀಂಕೋರ್ಟ್

Update: 2020-07-08 17:34 GMT

ಹೊಸದಿಲ್ಲಿ: ದೆಹಲಿ ಎನ್ ಸಿಆರ್ ಹೊರತುಪಡಿಸಿ ದೇಶಾದ್ಯಂತ ಲಾಕ್ಡೌನ್ ಮುಕ್ತಾಯವಾದ ಬಳಿಕ 10 ದಿನಗಳ ವರೆಗೆ ಬಿಎಸ್-4 ಅನುಸರಣೆಯ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿ ಮಾರ್ಚ್ 27ರಂದು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ವಾಪಾಸು ಪಡೆದಿದೆ.

ಆಟೊಮೊಬೈಲ್ ಡೀಲರ್ ಗಳು ನಿರ್ದೇಶನವನ್ನು ಉಲ್ಲಂಘಿಸಿ ಲಾಕ್ಡೌನ್ ಅವಧಿಯಲ್ಲಿ ಮಾರ್ಚ್ 31ರವರೆಗೂ ಬಿಎಸ್-4 ವಾಹನಗಳನ್ನು ಮಾರಾಟ ಮಾಡಿದ್ದರು ಎಂದು ನ್ಯಾಯಾಲಯ ಹೇಳಿದೆ.

ವಂಚನೆ ಎಸಗುವ ಮೂಲಕ ನ್ಯಾಯಾಲಯದ ಆದೇಶದ ಪ್ರಯೋಜನ ಪಡೆಯಬೇಡಿ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್.ಎ.ನಝೀರ್ ಮತ್ತು ಇಂದಿರಾ ಬ್ಯಾನರ್ಜಿಯವರನ್ನು ಒಳಗೊಂಡ ನ್ಯಾಯಪೀಠ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆ ವೇಳೆ ಎಚ್ಚರಿಕೆ ನೀಡಿತು.

ದೇಶಾದ್ಯಂತ ಮಾರ್ಚ್ 25ರಂದು ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ವರ್ಷಾಂತ್ಯದವರೆಗೆ ಆರು ದಿನ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಮಾರಾಟವಾಗದ ಬಿಎಸ್-4 ವಾಹನಗಳ ಪೈಕಿ ಶೇಕಡ 10ನ್ನು ಲಾಕ್ ಡೌನ್ ಮುಗಿದು 10 ದಿನಗಳವರೆಗೂ ಮಾರಾಟ ಮಾಡಲು ಮಾರ್ಚ್ 27ರಂದು ಅವಕಾಶ ನೀಡಲಾಗಿತ್ತು.

ಮಾರ್ಚ್ 31ರ ಬಳಿಕ ಮಾರಾಟವಾದ ಬಿಎಸ್-4 ವಾಹನಗಳನ್ನು ನೋಂದಣಿ ಮಾಡಿಕೊಳ್ಳದಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಮಾರ್ಚ್ ಕೊನೆಯ ವಾರ ಲಾಕ್ಡೌನ್ ನಡುವೆಯೇ ಬಿಎಸ್-4 ವಾಹನಗಳ ಮಾರಾಟ ಭರ್ಜರಿಯಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ಇ-ವಾಹನ್ ಪೋರ್ಟಲ್ನಲ್ಲಿ ಮಾರ್ಚ್ 31ರವರೆಗೆ ಅರ್ಜಿ ಸಲ್ಲಿಸಲಾದ ವಾಹನಗಳ ವಿವರ ನೀಡುವಂತೆ ಪೀಠ ಸರ್ಕಾರಕ್ಕೆ ಸೂಚಿಸಿದೆ. ಅಂತೆಯೇ ಮಾರಾಟ ಮಾಡಲಾದ ವಾಹನಗಳ ವಿವರ ನೀಡುವಂತೆ ಡೀಲರ್ಗಳಿಗೆ ಆದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News