ಭೂಂಕಪದಲ್ಲಿ ಕುಟುಂಬವನ್ನು ಕಳೆದುಕೊಂಡು ಸ್ಪ್ಯಾನಿಶ್ ಫ್ಲೂ, ಕೊರೋನ ವೈರಸನ್ನು ಮಣಿಸಿದ 106 ವರ್ಷದ ಮುಕ್ತಾರ್ ಅಹ್ಮದ್

Update: 2020-07-08 18:31 GMT

ಹೊಸದಿಲ್ಲಿ: ಕೊರೋನ ವೈರಸನ್ನು ಮಣಿಸಿರುವ ದಿಲ್ಲಿ ನಿವಾಸಿ 106 ವರ್ಷದ ಮುಕ್ತಾರ್ ಅಹ್ಮದ್ ದೇಶದಲ್ಲಿ ಈ ಮಾರಕ ವೈರಸನ್ನು ಜಯಿಸಿ ಬಂದವರಲ್ಲಿ ಹಿರಿಯರಾಗಿದ್ದಾರೆ.

ಇತ್ತೀಚೆಗಷ್ಟೇ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಬಿಡುಗಡೆಯಾದ ಮುಕ್ತಾರ್ ಅಹ್ಮದ್ 1918ರಲ್ಲಿ ಸ್ಪ್ಯಾನಿಶ್ ಫ್ಲೂ ಅನ್ನು ಮಣಿಸಿದ್ದರು. ಆಗ ಅವರಿಗೆ 4 ವರ್ಷ ವಯಸ್ಸಾಗಿತ್ತು.

ದೇವರಲ್ಲಿ ನಂಬಿಕೆಯಿರಿಸಿ ಕೊರೋನ ವೈರಸ್ ನಿಂದ ಗುಣಮುಖನಾಗಿದ್ದೇನೆ ಎಂದು ಅವರು ಹೇಳುತ್ತಾರೆ. ಸುಮಾರು 17 ದಿನಗಳ ಕಾಲ ಅವರು ಚಿಕಿತ್ಸೆ ಪಡೆದಿದ್ದಾರೆ.

ತಾನು ಬದುಕಿನಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದೇನೆ ಎಂದು ಮುಕ್ತಾರ್ ಹೇಳುತ್ತಾರೆ. ಮಹಾರಾಷ್ಟ್ರದ ಒಸ್ಮಾನಾಬಾದ್ ನಿಂದ ದಿಲ್ಲಿಗೆ ಬಂದ ಅವರು ಡಿಸೈನರ್ ಆಗಿ ಕೆಲಸ ಮಾಡಿದ್ದರು.

1993ರಲ್ಲಿ ಸಂಭವಿಸಿದ ಲಾತೂರ್ ಭೂಕಂಪದಲ್ಲಿ ಮೂವರು ಮಕ್ಕಳು, 11 ಮೊಮ್ಮಕ್ಕಳು ಸೇರಿ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದೇನೆ ಎಂದವರು ಹೇಳುತ್ತಾರೆ. ನಂತರ ದಿಲ್ಲಿಗೆ ಬಂದ ಅವರು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಒಂದು ದಿನ ದಿಲ್ಲಿಯ ಕುಟುಂಬವೊಂದು ಅವರನ್ನು ಕಂಡು ತಮ್ಮ ಮನೆಗೆ ಕರೆದೊಯ್ದಿತ್ತು. ಇದೀಗ 13 ವರ್ಷಗಳಿಂದ ಅವರು ಇದೇ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಜನರು ‘ಧೈರ್ಯದಿಂದಿರಬೇಕು, ಭಗವಂತನಲ್ಲಿ ಮತ್ತು ನಿಮ್ಮಲ್ಲಿ ನಂಬಿಕೆಯಿರಬೇಕು” ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News