ಆಲಿಘರ್ ಮುಸ್ಲಿಂ ವಿವಿಯ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿ ಬಂಧನ

Update: 2020-07-09 19:02 GMT

ಹೊಸದಿಲ್ಲಿ: ಆಲಿಘರ್ ಮುಸ್ಲಿಂ ವಿವಿಯ ವಿದ್ಯಾರ್ಥಿಯೊಬ್ಬರನ್ನು ಉತ್ತರ ಪ್ರದೇಶದ ಅಝಂಗರ್ ನಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಬಂಧಿತ ಶರ್ಜೀಲ್ ಉಸ್ಮಾನಿ ಡಿಸೆಂಬರ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಆದರೆ ಯಾವ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ.

ಬಂಧನಕ್ಕೆ ಸಂಬಂಧಿಸಿ ಅಝಂಗರ್ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ದ ಕ್ವಿಂಟ್ ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ಉಸ್ಮಾನಿಯನ್ನು ಬಂಧಿಸಿದ್ದು ಯಾರು ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ.

ಐವರು ಸಾಮಾನ್ಯ ಉಡುಪಿನಲ್ಲಿ ಬಂದು ಕ್ರೈಮ್ ಬ್ರಾಂಚ್ ನವರು ಎಂದು ಹೇಳಿಕೊಂಡರು. ಉಸ್ಮಾನಿ ಆಗಲೇ ಅವರ ಜೊತೆಗಿದ್ದ. ಆತನ ಕೈಗಳನ್ನು ಕಟ್ಟಿ ಹಾಕಿದ್ದರು. ಆತ ತಲೆ ಕೆಳಗೆ ಮಾಡಿದ್ದ ಎಂದು ಉಸ್ಮಾನಿಯ ಸಹೋದರ ಅರೀಬ್ ಹೇಳಿದ್ದಾರೆ.

ಇದು ಬಂಧನವಲ್ಲ ಎಂದು ಉಸ್ಮಾನಿಯವರ ತಂದೆ ಆತಂಕ ವ್ಯಕ್ತಪಡಿಸಿದ್ದಾರೆ. “ಯಾವ ಆರೋಪದ ಮೇಲೆ ಬಂಧನ ನಡೆಸಲಾಗಿದೆ ಎನ್ನುವುದನ್ನು ಅವರು ಹೇಳಿಲ್ಲ. ಅವನೊಂದಿಗೆ ಏನನ್ನೂ ಮಾತನಾಡಲು ಅವರು ಅವಕಾಶ ನೀಡಿಲ್ಲ. ಎಂದು ಉಸ್ಮಾನಿಯವರ ತಾಯಿ ಹೇಳಿದ್ದಾರೆ.

ಆದರೆ ಭಯೋತ್ಪಾದನೆ ನಿಗ್ರಹ ಪಡೆ ಶರ್ಜೀಲ್ ಅವರನ್ನು ಬಂಧಿಸಿದೆ ಎಂದು ಹೆಚ್ಚುವರಿ ಎಸ್ಪಿ ಅರವಿಂದ್ ಕುಮಾರ್ ಹೇಳಿದ್ದಾಗಿ ಅಮರ್ ಉಜಾಲಾ ವರದಿ ಮಾಡಿದೆ.

ಆತನ ಲ್ಯಾಪ್ ಟಾಪ್, ಎಲ್ಲ ಪುಸ್ತಕಗಳು ಮತ್ತು ಬಟ್ಟೆ ಬರೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅರೀಬ್ ಹೇಳಿದ್ದಾರೆ. ನಮ್ಮೆಲ್ಲರ ಭಾವಚಿತ್ರ ಸೆರೆಹಿಡಿಯಲಾಗಿದ್ದು, ಸಂಬಂಧಿಕರು ಎಂದು ದಾಖಲಿಸಿಕೊಳ್ಳಲಾಗಿದೆ. ಮಹಿಳಾ ಅಧಿಕಾರಿಗಳು ಇಲ್ಲದಿದ್ದರೂ ಉಸ್ಮಾನಿಯ ಅತ್ತೆಯ ಭಾವಚಿತ್ರವನ್ನೂ ಪಡೆದುಕೊಳ್ಳಲಾಗಿದೆ ಎಂದು ಅರೀಬ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News