ಬಂಟ್ವಾಳದಲ್ಲಿ ಗುರುವಾರ ವೈದ್ಯೆ ಸೇರಿ 24 ಮಂದಿಗೆ ಕೊರೋನ ಪಾಸಿಟಿವ್

Update: 2020-07-09 16:19 GMT
ಸಾಂದರ್ಭಿಕ ಚಿತ್ರ

ಬಂಟ್ವಾಳ, ಜು.9: ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೊರೋನ ಹಾಟ್ ಸ್ಪಾಟ್ ಆಗಿದ್ದ ಬಂಟ್ವಾಳ ಪೇಟೆ ಸಹಿತ ತಾಲೂಕಿನಲ್ಲಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಗುರುವಾರ ಒಂದೇ ದಿನ 24 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ.  

ತಾಲೂಕಿನಲ್ಲಿ ದೃಢಪಟ್ಟ 24 ಪ್ರಕರಣಗಳ ಪೈಕಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಪೇಟೆಯ 12 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ ಬಂಟ್ವಾಳ ಪೇಟೆಯ ಪತ್ರಿಕಾ ವಿತರಕರೋರ್ವರಿಗೆ ಸೋಂಕು ದೃಢಪಟ್ಟಿತ್ತು. ಇದೀಗ ಅವರ ಪುತ್ರ, ಪತ್ನಿ ಮತ್ತು ಸಂಬಂಧಿಕರು ಸೇರಿ 9 ಮಂದಿಗೆ ಹಾಗೂ ಬಂಟ್ವಾಳ ಕಸ್ಬಾ ಗ್ರಾಮದ ಆಗ್ರಹಾರ ನಿವಾಸಿ 55 ರಹರೆಯದ ವ್ಯಕ್ತಿಗೆ ಸೋಂಕು ಪಾಸಿಟಿವ್ ಆಗಿದೆ. 

ಸೋಂಕು ತಾಲೂಕಿನ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು ಇಂದು 1 ವರ್ಷದ ಮಗುವಿನಿಂದ ಹಿಡಿದು 78 ವರ್ಷ ಪ್ರಾಯದ ವೃದ್ಧರಿಗೆ ಸೋಂಕು ದೃಢಪಟ್ಟಿದೆ. ತಾಲೂಕಿನ ಸಜೀಪಮೂಡ ಗ್ರಾಮದಲ್ಲಿ ಒಂದು ವರ್ಷದ ಗಂಡು ಮಗು,11, 13, 17 ವರ್ಷದ ಬಾಲಕರು ಹಾಗೂ 74, 78 ವರ್ಷದ ವೃದ್ಧರಿಗೆ ಸೋಂಕು ತಗುಲಿದೆ. ಉಳಿದಂತೆ ಪುದು ಗ್ರಾಮ ವ್ಯಾಪ್ತಿಯಲ್ಲಿ 5, ಮೂಡನಡುಗೋಡು 2, ಕಳ್ಳಿಗೆ, ಬೋಳಂತೂರು, ಬಾಳ್ತಿಲ, ಸಂಗಬೆಟ್ಟು ಗ್ರಾಮದಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ. 

ಜಿಲ್ಲೆಗೆ ಕೋವಿಡ್19 ಸೋಂಕು ಕಾಲಿಟ್ಟ ಆರಂಭದಲ್ಲಿ ಬಂಟ್ವಾಳ ಕಸ್ಬಾದಲ್ಲಿ ಸೋಂಕು ಪ್ರಕರಣಗಳು ಕಂಡುಬಂದಿತ್ತು. ಮೂವರು ಮಹಿಳೆಯರು ಸಾವನ್ನಪ್ಪಿದ್ದರು. ಬಳಿಕ ಎರಡು ತಿಂಗಳು ಸೋಂಕಿನ ಪ್ರಕರಣ ಕಡಿಮೆಯಾಗಿತ್ತು. ವಾರದ ಹಿಂದೆ ಲೊರೆಟೊಪದವು ಎಂಬಲ್ಲಿನ ಮಹಿಳೆಯೋರ್ವರು ಸೋಂಕಿನಿಂದ ಮೃತಪಟ್ಟಿದ್ದರು. ಇದರೊಂದಿಗೆ ಬಂಟ್ವಾಳ ಕಸ್ಬಾ ಗ್ರಾಮವೊಂದರಲ್ಲಿಯೇ ಮೃತರ ಸಂಖ್ಯೆ 4 ಕ್ಕೇರಿತ್ತು. ಇದೀಗ ಜುಲೈ 7ರಂದು 10ಕ್ಕೂ ಅಧಿಕ ಪ್ರಕರಣಗಳು, ಜುಲೈ 8ರಂದು 12 ಪ್ರಕರಣಗಳು ಕಂಡುಬಂದಿತ್ತು. ಜು.9ರ ಒಂದೇ ದಿನ ಬರೋಬ್ಬರಿ 24 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಫರಂಗಿಪೇಟೆಯನ್ನು ಒಳಗೊಂಡ ಪುದು ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಗ್ರಾಮದಲ್ಲಿ ಒಟ್ಟು12 ಮಂದಿಗೆ ಸೋಂಕು ಪಾಸಿಟಿವ್ ಆಗಿದ್ದು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಫರಂಗಿಪೇಟೆಯ ಖಾಸಗಿ ಆಸ್ಪತ್ರೆಯ ವೈದ್ಯೆಗೆ ಕೊರೋನ ಪಾಸಿಟಿವ್ ಆಗಿದೆ. ಆದರೆ ಈ ಆಸ್ಪತ್ರೆಯಲ್ಲಿ 14 ದಿನಗಳಿಂದ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಸೋಂಕು ಪಾಸಿಟಿವ್ ಆದ ವೈದ್ಯೆ ಒಬ್ಬರೇ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರು ಸಂಪೂರ್ಣ ಗುಣಮುಖರಾಗುವ ವರೆಗೆ ಆಸ್ಪತ್ರೆ ತೆರೆಯಲು ಅವಕಾಶ ಇರುವುದಿಲ್ಲ ಎಂದು ಪುದು ಪಂಚಾಯತ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪುದು ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ಪುದು ಗ್ರಾಮ ಪಂಚಾಯತ್ ಆಡಳಿತ ಜುಲೈ10ರಿಂದ ಜುಲೈ 24ರ ವರೆಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಗ್ರಾಮದಲ್ಲಿ ಅಂಗಡಿ ಮುಂಗಟ್ಟು ತೆರೆಯಲು ನಿರ್ಧರಿಸಿದ್ದು, ಮಧ್ಯಾಹ್ನ 2ರಿಂದ ಅಂಗಡಿಗಳು ಸ್ವಯಂ ಪ್ರೇರಿತ ಬಂದ್ ಆಗಲಿದೆ. ಇದಕ್ಕೆ ಅಂಗಡಿ ಮಾಲಕರು, ಆಟೋ ರಿಕ್ಷಾ ಸಹಿತ ಗೂಡ್ಸ್ ವಾಹನಗಳ ಮಾಲಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.‌ 

ಹಾಗೆಯೇ ತಾಲೂಕಿನ ವಿಟ್ಲ ಭಾಗದಲ್ಲೂ ವೈರಸ್ ಹರಡುತ್ತಿದ್ದು ಈಗಾಗಲೇ ಕೆಲವು ಮಂದಿಗೆ ಸೋಂಕು ದೃಢಪಟ್ಟಿದೆ. ‌ವಿಟ್ಲದ ಒಕ್ಕೆತ್ತೂರು ಯುವಕನಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಯುವಕನ ಸಹೋದರ, ಹಾಗೂ ಪತ್ನಿಯಲ್ಲೂ ಸೋಂಕು ದೃಢಪಟ್ಟಿತ್ತು. ಇದೀಗ ಅದೇ ಕುಟುಂಬದ ಮತ್ತೊಬ್ಬ ಮಹಿಳೆಯಲ್ಲಿ ಸೋಂಕು ಪಾಸಿಟಿವ್ ಆಗಿದೆ. ಈ ಮೂಲಕ ಕುಟುಂಬದ ಒಟ್ಟು ನಾಲ್ವರಿಗೆ ಪಾಸಿಟಿವ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News