ದುಬೆ ಪ್ರಕರಣ: ಸಿಬಿಐ ತನಿಖೆಗೆ ಪ್ರಿಯಾಂಕಾ ಆಗ್ರಹ

Update: 2020-07-09 18:09 GMT

ಹೊಸದಿಲ್ಲಿ, ಜು.9: ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆಗೆ ಸರಕಾರದ ಕೆಲವು ವ್ಯಕ್ತಿಗಳೇ ರಕ್ಷಣೆ ಒದಗಿಸುತ್ತಿದ್ದಾರೆ ಎಂಬ ಅನುಮಾನವಿದ್ದು, ಈ ಬಗ್ಗೆ ವಾಸ್ತವಾಂಶ ಬೆಳಕಿಗೆ ಬರಲು ಸಿಬಿಐ ತನಿಖೆ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

 ಕಳೆದ ವಾರ ಎಂಟು ಪೊಲೀಸರನ್ನು ಹತ್ಯೆಗೈದ ಪ್ರಕರಣದ ಆರೋಪಿ ದುಬೆ, ಬಳಿಕ ಐದು ದಿನ ನಾಲ್ಕು ರಾಜ್ಯಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಓಡಾಡಿದ್ದಾನೆ. ಇದು ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತದೆ ಮತ್ತು ಸಂಶಯವನ್ನೂ ಮೂಡಿಸುತ್ತಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ದುಬೆಯ ಕ್ರಿಮಿನಲ್ ಕೃತ್ಯಗಳ ಬಗ್ಗೆ ಮೂರು ತಿಂಗಳ ಹಿಂದೆಯೇ ಪೊಲೀಸರಿಗೆ ಪತ್ರವೊಂದು ಬಂದಿತ್ತು. ಆದರೂ ಪೊಲೀಸರು ಸುಮ್ಮನಿದ್ದರು ಮತ್ತು ಸರಕಾರ ರಚಿಸಿರುವ ಪ್ರಮುಖ ಕ್ರಿಮಿನಲ್ ಗಳ ಪಟ್ಟಿಯಲ್ಲೂ ದುಬೆಯ ಹೆಸರಿಲ್ಲದಿರುವುದು ಸಂಶಯಕ್ಕೆ ಕಾರಣವಾಗಿದೆ. ಆತನಿಗೆ ಸರಕಾರದ ವ್ಯಕ್ತಿಗಳೇ ರಕ್ಷಣೆ ನೀಡುತ್ತಿದ್ದರೇ ಎಂಬ ಪ್ರಶ್ನೆ ಮೂಡಿದೆ. ಈ ಎಲ್ಲಾ ಗೊಂದಲ ನಿವಾರಣೆಗೆ ಸಿಬಿಐ ತನಿಖೆಯ ಅಗತ್ಯವಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ದೇಶದ್ರೋಹಿ ಪೊಲೀಸರನ್ನು ಶಿಕ್ಷಿಸಿ: ಮೃತ ಪೊಲೀಸರ ಕುಟುಂಬದವರ ಆಕ್ರೋಶ

ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಪರಾರಿಯಾಗಲು ನೆರವಾದ ಪೊಲೀಸರು ದೊಡ್ಡ ಅಪರಾಧಿಗಳಾಗಿದ್ದಾರೆ. ಉತ್ತರಪ್ರದೇಶದ ಪೊಲೀಸ್ ಇಲಾಖೆಯಲ್ಲಿರುವ ದೇಶದ್ರೋಹಿ ಪೊಲೀಸರನ್ನು ಮೊದಲು ಶಿಕ್ಷಿಸಬೇಕು ಎಂದು ದುಬೆಯ ಸಹಚರರಿಂದ ಹತ್ಯೆಯಾದ 8 ಪೊಲೀಸ್ ಸಿಬಂದಿಗಳ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ದುಬೆಗೆ ಮಾಹಿತಿ ನೀಡುವ, ಆತನಿಗೆ ಸಹಾಯ ಮಾಡುವ , ತಮ್ಮವರ ಬೆನ್ನಿಗೇ ಇರಿಯುವ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಈ ಹಿಂದೆಯೇ ಒತ್ತಾಯಿಸಿದ್ದೆ. ಆದರೆ ಈ ಬಗ್ಗೆ ಯಾರೂ ಗಮನ ಹರಿಸಲಿಲ್ಲ ಎಂದು ಹತ್ಯೆಯಾದ ಪೊಲೀಸ್ ಕಾನ್ಸ್ಟೇಬಲ್ ಜಿತೇಂದ್ರರ ತಂದೆ ತೀರಥ್ ಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News