ಮೆಲ್ಕಾರ್ ನಲ್ಲಿ ಪೊಲೀಸರಿಗೆ ಹಲ್ಲೆ ಆರೋಪ: ವ್ಯಕ್ತಿಯ ಬಂಧನ

Update: 2020-07-10 05:44 GMT
ಗಾಯಾಳು ಪೊಲೀಸ್

ಬಂಟ್ವಾಳ, ಜು.10: ತಾಲೂಕಿನ ಮೇಲ್ಕಾರ್ ನಲ್ಲಿ ಗುರುವಾರ ರಾತ್ರಿ ಇಬ್ಬರು ಪೊಲೀಸರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 

ಕಲ್ಲಡ್ಕ ಸಮೀಪದ ಗೋಳ್ತಮಜಲು ನಿವಾಸಿ ಅಬ್ದುಲ್ ಸಲಾಂ(28) ಬಂಧಿತ ಆರೋಪಿ. ಹಲ್ಲೆ ನಡೆಸಿದ ಈತನಿಗೂ ಬಳಿಕ ಸ್ಥಳಕ್ಕೆ ಬಂದ ಕೆಲವು ಪೊಲೀಸರು ನೀಡಿರುವ ಲಾಠಿ ಏಟಿನಿಂದ ಗಾಯಗಳಾಗಿದ್ದು, ಆರೋಪಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  

ಬೈಕ್ ಒಂದರಲ್ಲಿ ಬಂದ ಆರೋಪಿ ಸಲಾಂ ಮತ್ತು ಮತ್ತೋರ್ವ ವ್ಯಕ್ತಿ ಲಾರಿ ಚಾಲಕನೊಂದಿಗೆ ಗಲಾಟೆ ಮಾಡುತ್ತಿರುವುದನ್ನು ಕಂಡ ಸ್ಥಳದಲ್ಲಿದ್ದ ಹೈವೇ ಪ್ಯಾಟ್ರೋಲ್ ಗಸ್ತು ವಾಹನದಲ್ಲಿ ಇದ್ದ ಇಬ್ಬರು ಪೊಲೀಸರು ಗಲಾಟೆ ನಿಯಂತ್ರಿಸಲು ಮುಂದಾಗಿದ್ದಾರೆ. ಈ ವೇಳೆ ಸಲಾಂ ಪೊಲೀಸ್ ಕೈಯಲ್ಲಿದ್ದ ಲಾಠಿ ಕಿತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಪೊಲೀಸರ ತಲೆಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. 

ಆ ಬಳಿಕ ಗಸ್ತು ವಾಹನದಲ್ಲಿದ್ದ ಪೊಲೀಸರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದ ನಗರ ಠಾಣೆಯ ಹೆಚ್ಚುವರಿ ಪೊಲೀಸರು ಸಲಾಂಗೆ ಲಾಠಿ ಏಟು ನೀಡಿದ್ದು, ಇದರಿಂದಲೂ ಸಲಾಂಗೆ ಗಾಯಗಳಾಗಿವೆ ಎನ್ನಲಾಗಿದೆ. ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸಲಾಂ ಜೊತೆ ಇದ್ದ ಮತ್ತೋರ್ವ ಓಡಿ ಪರಾರಿಯಾಗಿದ್ದಾನೆ.‌ ಇಬ್ಬರೂ ಅಮಲಿನಲ್ಲಿದ್ದಂತೆ ವರ್ತಿಸುತ್ತಿದ್ದರು ಎಂದು ಸ್ಥಳದಲ್ಲಿದ್ದವರು ಆರೋಪಿಸಿದ್ದಾರೆ.

ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಸಲಾಂ ವಿರುದ್ಧ 353, 504, 506, 332, 307,427 ಐಪಿಸಿ ಮತ್ತು 2ಎ ಕೆಪಿಡಿಎಲ್ ಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. 

ಘಟನೆಗೆ ಸಂಬಂಧಿಸಿದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ‌. ಇದಕ್ಕೆ ಸಂಬಂಧಿಸಿ ಪೊಲೀಸರು ಸ್ಪಷ್ಟನೆ ನೀಡಿದ್ದು, ಆರೋಪಿ ಹಲ್ಲೆ ನಡೆಸಿರುವುದರಿಂದ ನಗರ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕ (ಎಎಸ್ಸೈ) ಶೈಲೇಶ್ ಟಿ. ಮತ್ತು ಇತರ ಮೂವರು ಪೊಲೀಸರಿಗೆ ಗಾಯವಾಗಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಆರೋಪಿ ಪೊಲೀಸ್ ವಾಹನಕ್ಕೂ ಹಾನಿ ಮಾಡಿದ್ದಾನೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News