ತಜ್ಞರು-ಪೋಷಕರೊಂದಿಗೆ ಚರ್ಚಿಸಿಯೇ ಶಾಲಾರಂಭದ ನಿರ್ಧಾರ: ಸಚಿವ ಸುರೇಶ್ ಕುಮಾರ್

Update: 2020-07-10 11:56 GMT

ಮಂಗಳೂರು, ಜು.9: ಕೋವಿಡ್ ಭೀತಿ ಇರುವ ಹಿನ್ನೆಲೆಯಲ್ಲಿ ಸದ್ಯ ಶಾಲಾರಂಭ ಕಷ್ಟಸಾಧ್ಯ. ಆನ್‌ಲೈನ್ ಶಿಕ್ಷಣಕ್ಕೂ ಕೆಲವೆಡೆ ನೆಟವರ್ಕ್ ಸಮಸ್ಯೆ ಇದೆ. ಪೋಷಕರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ನಿರಾತಂಕವಾಗಿ ಮುಗಿದ ಹಿನ್ನೆಲೆ ಪೊಳಲಿ ರಾಜರಾಜೇಶ್ವರಿ ಕ್ಷೇತ್ರಕ್ಕೆ ಆಗಮಿಸಿದ ಸಚಿವರು ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಹೈಕೋರ್ಟ್ ಯಾವುದೇ ಮಕ್ಕಳಿಗೆ ಆನ್‌ಲೈನ್ ತರಗತಿ ವಿಚಾರದಲ್ಲಿ ಬಲವಂತ ಮಾಡುವ ಹಾಗಿಲ್ಲ ಎಂದು ಹೇಳಿದೆ. ವಾಸ್ತವ ಪರಿಸ್ಥಿತಿ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇದಕ್ಕಾಗಿ ಈ ಹಿಂದಿನ ಏಳು ಜನ ಶಿಕ್ಷಣ ಸಚಿವರ ಜೊತೆ ಸಭೆ ನಡೆಸಲಿದ್ದೇನೆ. ಮುಂದಿನ ಶುಕ್ರವಾರ ಈ ಬಗ್ಗೆ ಸಭೆ ನಡೆಸಿ ಚರ್ಚಿಸುವುದಾಗಾಗಿ ಹೇಳಿದರು.
ಮಕ್ಕಳಿಗೆ ಪೂರಕವಾಗುವ ರೀತಿಯಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುತ್ತದೆ. ಮಕ್ಕಳಿಗೆ ಆನ್ ಲೈನ್‌ಶಿಕ್ಷಣ ಕಡ್ಡಾಯ ಮತ್ತು ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಅಂತ ಹೈಕೋರ್ಟ್ ಕೂಡ ಹೇಳಿದೆ. ಜುಲೈ ಅಂತ್ಯದವರೆಗೆ ಶಾಲಾ ಆರಂಭ ಮಾಡಬಾರದು ಅಂತ ಕೇಂದ್ರ ಸರಕಾರ ಹೇಳಿದೆ. ಹೀಗಾಗಿ ತಜ್ಞರು ಮತ್ತು ಪೋಷಕರ ಜೊತೆ ಚರ್ಚಿಸುವುದಾಗಿ ಅವರು ಹೇಳಿದರು.

ಪರೀಕ್ಷೆ ಆರಂಭಕ್ಕೂ ಮುನ್ನ ವಿಘ್ನವಿಲ್ಲದೆ ಪರೀಕ್ಷೆ ನಡೆಯಲಿ ಎಂದು ಬೇಡಿಕೊಂಡಿದ್ದ ಸುರೇಶ್ ಕುಮಾರ್ ಅವರು ಪತ್ನಿಯೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು. ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿ ಸೇರಿದಂತೆ ಹಲವು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News