ಪುದು: ಎರಡು ಕುಟುಂಬದ 16 ಮಂದಿಗೆ ಕೊರೋನ ಪಾಸಿಟಿವ್

Update: 2020-07-10 12:29 GMT
ಮಧ್ಯಾಹ್ನದ ಬಳಿಕ ಸ್ವಯಂ ಪ್ರೇರಿತ ಬಂದ್

ಬಂಟ್ವಾಳ, ಜು.10: ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಸಮೀಪದ ಮಾರಿಪಳ್ಳದ ಎರಡು ಕುಟುಂಬದ 16 ಮಂದಿಗೆ ಶುಕ್ರವಾರ ಕೊರೋನ ಸೋಂಕು ಪಾಸಿಟಿವ್ ಆಗಿದೆ.

ಇತ್ತೀಚಿಗೆ ಮಾರಿಪಳ್ಳದ ವ್ಯಕ್ತಿಯೊಬ್ಬರು ಅಪಘಾತದಿಂದ ಗಾಯಗೊಂಡಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಅವರ ಗಂಟಲ ದ್ರವದ ಮಾದರಿಯನ್ನು ಕೋವಿಡ್ - 19 ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಆದರೆ ಅವರ ಮನೆಯ ಹಾಗೂ ಪತ್ನಿಯ ಸಹೋದರಿಯ ಮನೆಯವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಈ ಎರಡು ಮನೆಯ ಒಟ್ಟು 12 ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ‌.

ಅಲ್ಲದೆ ಮಾರಿಪಳ್ಳ ಪರಿಸರದ ಮತ್ತೊಂದು ಮನೆಯ ವ್ಯಕ್ತಿಯೊಬ್ಬರಿಗೆ ಕೆಲವು ದಿನಗಳ ಹಿಂದೆ ಕೊರೋನ ಪಾಸಿಟಿವ್ ಆಗಿತ್ತು. ಅವರ ಮನೆಯ ನಾಲ್ವರಿಗೆ ಕೊರೋನ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ‌ಗ್ರಾಮದಲ್ಲಿ ಒಟ್ಟು 26 ಮಂದಿಗೆ ಕೊರೋನ ಸೋಂಕು ಪಾಸಿಟಿವ್ ಅಗಿದ್ದು ಗ್ರಾಮದಲ್ಲಿ ಅತಂಕ ಮನೆ ಮಾಡಿದೆ.

ಗ್ರಾಮದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 10ರಿಂದ ಹದಿನಾಲ್ಕು ದಿನಗಳ ಕಾಲ ಮಧ್ಯಾಹ್ನ 2 ಗಂಟೆಯ ಬಳಿಕ ಸ್ವಯಂ ಪ್ರೇರಿತ ಬಂದ್ ಗೆ ನಿರ್ಧರಿಸಲಾಗಿದೆ. ಈ ಬಗ್ಗೆ ಮಾತನಾಡಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು, ಮಧ್ಯಾಹ್ನದ ಬಳಿಕದ ಬಂದ್ ಗೆ ಮೊದಲ ದಿನ ಗ್ರಾಮದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಗ್ರಾಮದ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ಹಾಗೆಯೇ ಆಟೋ ರಿಕ್ಷಾ, ಗೂಡ್ಸ್ ವಾಹನ, ಟೂರಿಸ್ಟ್ ಕಾರುಗಳ ಚಾಲಕರೂ ಬೆಂಬಲ ನೀಡಿದ್ದಾರೆ ಎಂದರು.

ಗ್ರಾಮದಲ್ಲಿ ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬಂದ್ ಗೆ ಸರ್ವರು ಬೆಂಬಲ ವ್ಯಕ್ತಪಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ‌. ಅಂಗಡಿ ಮಾಲಕರು, ಬಾಡಿಗೆ ವಾಹನಗಳ ಚಾಲಕರು ಆರ್ಥಿಕ ಮುಗ್ಗಟ್ಟಿನ ನಡುವೆಯೂ ಬಂದ್ ಮಾಡಿದ್ದಾರೆ. ಯಾರೂ ಅನಗತ್ಯವಾಗಿ ಮನೆಯಿಂದ ಹೊರ ಬಾರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಅಂತರ ಕಾಪಾಡುವುದು, ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿರುವ ರಮ್ಲಾನ್ ಮಾರಿಪಳ್ಳ, ಎಲ್ಲರ ಸಹಕಾರದಿಂದ ಮಾತ್ರ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಾಧ್ಯ ಎಂದಿದ್ದಾರೆ.

ಗ್ರಾಮದಲ್ಲಿ ಸ್ವಯಂ ಪ್ರೇರಿತ ಬಂದ್ ಯಶಸ್ವಿ :

ಗ್ರಾಮದಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಅಂಗಡಿ ಮುಂಗಟ್ಟು ಮಧ್ಯಾಹ್ನದ ಬಳಿಕ ಸ್ವಯಂ ಪ್ರೇರಣೆಯಿಂದ ಬಂದ್ ಮಾಡುವಂತೆ ಮಾಡಿರುವ ಮನವಿಗೆ ವರ್ತಕರು, ಅಟೋ ರಿಕ್ಷಾ, ಗೂಡ್ಸ್ ವಾಹನ ಹಾಗೂ ಗ್ರಾಮಸ್ಥರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಮಧ್ಯಾಹ್ನ 2 ಗಂಟೆ ಆಗಿತ್ತಿದ್ದಂತೆ ಎಲ್ಲಾ ಅಂಗಡಿಗಳ ಮಾಲಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿದರು. ಶುಕ್ರವಾರ ಆಗಿದ್ದರಿಂದ ಬಹುತೇಕ ಮುಸ್ಲಿಮ್ ವ್ಯಾಪಾರಿಗಳು 12 ಗಂಟೆಯ ಸುಮಾರಿಗೆ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ತೆರಳಿದರು. ಆಟೋ ರಿಕ್ಷಾ, ಗೂಡ್ಸ್ ವಾಹನ, ಟೂರಿಸ್ಟ್ ಕಾರುಗಳ ಚಾಲಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದು ಮಧ್ಯಾಹ್ನದ ಬಳಿಕ ಪಾರ್ಕ್ ಗೆ ಬಂದಿಲ್ಲ.

ಮಸೀದಿಗಳು ಬಂದ್ :

ಪುದು ಗ್ರಾಮದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಮಸೀದಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಫರಂಗಿಪೇಟೆ, ಮಾರಿಪಳ್ಳ, ಮಲ್ಲಿ, ಸುಜೀರ್, ಪೇರಿಮಾರ್, ಹತ್ತನೇ ಮೈಲುಗಲ್ಲು, ಕುಂಜತ್ಕಲ, ಅಮ್ಮೆಮಾರ್, ಕುಂಪನಮಜಲು ಮಸೀದಿಗಳನ್ನು ಬಂದ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News