25ಸಾವಿರ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ವಿತರಣೆ: ಪ್ರವೀಣ್ ಕುಮಾರ್

Update: 2020-07-10 12:26 GMT

ಉಡುಪಿ, ಜು.10: ಕೋವಿಡ್-19 ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದವರ ಪೈಕಿ ಜಿಲ್ಲೆಯ ಸುಮಾರು 25ಸಾವಿರ ಕಟ್ಟಡ ಕಾರ್ಮಿಕರಿಗೆ ತಲಾ 5000ರೂ. ನಂತೆ ಪರಿಹಾರದ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ ಎಂದು ಉಡುಪಿ ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೋವಿಡ್-19 ನಿರ್ಮೂಲನಾ ಜಾಗೃತಿ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲಾ ಎಐಟಿಯುಸಿ ಸಹಯೋಗದೊಂದಿಗೆ ಶುಕ್ರವಾರ ಸಂಘದ ಕಚೇರಿಯಲ್ಲಿ ಆಯೋಜಿಸಲಾದ ಜಿಲ್ಲೆಯ 700 ಕಟ್ಟಡ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಝರ್, ಸಾಬೂನುಗಳನ್ನೊಳಗೊಂಡ ಆರೋಗ್ಯ ಕಿಟ್ ವಿತರಣಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು.

ಆಧಾರ್ ಲಿಂಕ್ ಸಹಿತ ವಿವಿಧ ತಾಂತ್ರಿಕ ಕಾರಣದಿಂದಾಗಿ ಸುಮಾರು 2500 ಕಟ್ಟಡ ಕಾರ್ಮಿಕರ ಅರ್ಜಿಗಳು ಬಾಕಿ ಉಳಿದಿವೆ. ಈ ಕಾರ್ಮಿಕರ ದಾಖಲೆಗಳನ್ನು ಸರಿಪಡಿಸಿ, ಅರ್ಜಿಯನ್ನು ಮಂಡಳಿಗೆ ಕಳುಹಿಸಿ ಪರಿಹಾರ ಸಿಗುವಂತೆ ಮಾಡಲಾಗುವುದು. ಈ ಸೌಲಭ್ಯವನ್ನು ಪಡೆಯಲು ಲಾಕ್ ಡೌನ್‌ಗೆ ಮೊದಲು ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕರು ಮಾತ್ರ ಅರ್ಹರಾಗಿರುತ್ತಾರೆ ಎಂದರು.

ಕ್ಷೌರಿಕ ಮತ್ತು ಅಗಸರಿಗೂ ತಲಾ 5000ರೂ. ಕೋವಿಡ್ ಪರಿಹಾರ ಮೊತ್ತ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಇದೀಗ ಅರ್ಜಿ ಹಾಕುವ ಸಮಯವನ್ನು ವಿಸ್ತರಿಸಲಾಗಿದೆ. ಈವರೆಗೆ ಸಲ್ಲಿಕೆಯಾಗಿರುವ ಸುಮಾರು 1200 ಅರ್ಜಿಗಳ ಪೈಕಿ ಶೇ.55ರಷ್ಟು ಅರ್ಜಿಗಳ ಪರಿಶೀಲನೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ದ.ಕ. ಮತ್ತು ಉಡುಪಿ ಜಿಲ್ಲಾ ಎಐಟಿಯುಸಿ ಉಪಾಧ್ಯಕ್ಷ ಎಂ.ಕರುಣಾಕರ್ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸುಮಾರು 9000ಕೋಟಿ ರೂ. ಹಣ ಸಂಗ್ರಹವಾಗಿದೆ. ಈ ಹಣ ದುರುಪ ಯೋಗ ಆಗದಂತೆ ನೋಡಿಕೊಂಡು ನೋಂದಾಯಿತ ಕಾರ್ಮಿಕರಿಗೆ ಮಾತ್ರ ಸಿಗುವಂತೆ ಆಗಬೇಕು ಎಂದು ಒತ್ತಾಯಿಸಿದರು.

ಕಾರ್ಕಳ ಕಾರ್ಮಿಕ ನಿರೀಕ್ಷಕ ಪ್ರಸನ್ನ ಕುಮಾರ್, ದ.ಕ. ಮತ್ತು ಉಡುಪಿ ಜಿಲ್ಲಾ ಎಐಟಿಯುಸಿ ಉಪಾಧ್ಯಕ್ಷ ಬಿ.ಶೇಖರ್, ಸಂಘದ ಉಪಾಧ್ಯಕ್ಷ ಲಕ್ಷ್ಮಣ ನಾಕ್, ಕೋಶಾಧಿಕಾರಿ ಶಶಿಕಲಾ ಉಪಸ್ಥಿತರಿದ್ದರು. ಎಐಟಿಯುಸಿ ಉಡುಪಿ ಜಿಲ್ಲಾಧ್ಯಕ್ಷ ಕೆ.ವಿ.ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

40,000 ಮಾಸ್ಕ್ ವಿತರಣೆ
ಕೊರೋನ ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕ ಮಂಡಳಿಯ ವತಿಯಿಂದ ಜಿಲ್ಲೆಯ ರಿಕ್ಷಾ ಚಾಲಕರು, ಮಲ್ಪೆ ಬಂದರಿನ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರಿಗೆ ಸುಮಾರು 40,000 ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಜಿಲ್ಲೆಯ ಸುಮಾರು 4000 ಕಟ್ಟಡ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಜರ್, ಸಾಬೂನು ಗಳನ್ನೊಳಗೊಂಡ ಆರೋಗ್ಯ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಉಡುಪಿ ಕಾರ್ಮಿಕ ನಿರೀ್ಷಕ ಪ್ರವೀಣ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News